Saturday, June 22, 2019

ದಿನಕ್ಕೊಂದು ಲೇಖನ

ಭಾರತ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಸದೃಡ ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳಿಂದ ,ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವೇ ರಚನೆಯಾದ ಸರ್ಕಾರ ಪ್ರಜೆಗಳ ಯೋಗಕ್ಷೇಮಕ್ಕಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡುತ್ತಾ ಸಮಾನತೆಯ ಆಶಯದೊಂದಿಗೆ ಸಂವಿಧಾನದ ಹಕ್ಕುಬಾಧ್ಯತೆಗಳನ್ನು ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ಒಂದು ತತ್ವ ಸಿದ್ದಾಂತ, ದೇಶದ ಸಮಗ್ರತೆ, ಅಭಿವೃದ್ಧಿ, ಶಿಕ್ಷಣ ಮುಂತಾದ ಆಶಯಗಳನ್ನಿಟ್ಟುಕೊಂಡು ಅನೇಕ ಪಕ್ಷಗಳು ಹುಟ್ಟಿಕೊಂಡಿವೆ. ಪ್ರತಿ ಐದುವರ್ಷಕ್ಕೊಮ್ಮೆ ಪ್ರಜೆಗಳು ತಮ್ಮ ಪವಿತ್ರವಾದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವ ಮೂಲಕ ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದಾರೆ.

       ಮತದಾನ ಒಂದು ಪವಿತ್ರವಾದ ಕಾರ್ಯ. ಅರ್ಹ ಮತದಾರರ ತನ್ನ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು ಎಂದು ನಿರ್ಧರಿಸುವ ಹೊಣೆಗಾರರಾಗಿರುತ್ತಾನೆ. ಪ್ರತಿಯೊಂದು ಪಕ್ಷವೂ ದೇಶ ರಾಜ್ಯದ ಹಾಗೂ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳಲ್ಲಿ ಮಾಡಬೇಕಾದ ಕಾರ್ಯ ಚಟುವಟಿಕೆಗಳ ಯೋಜನೆಗಳನ್ನು ಪ್ರಣಾಳಿಕೆಯ ರೂಪದಲ್ಲಿ ಮತದಾರರ ಮುಂದೆ ಇಟ್ಟು ತಮ್ಮ ಮತವನ್ನು ತನಗೆ ನೀಡಬೇಕೆಂದು ಭಿನ್ನವಿಸಿಕೊಳ್ಳುತ್ತವೆ. ಪ್ರಬುದ್ಧ ಮತದಾರ ಪ್ರಣಾಳಿಕೆ ಅಂಶಗಳನ್ನು ಗಮನಿಸಿ ತನ್ನ ಅಮೂಲ್ಯವಾದ ಮತ ಹಾಕುವ ಮೂಲಕ ಸರ್ಕಾರ ರಚನೆಗೆ ತನ್ನ ಒಪ್ಪಿಗೆಯನ್ನು ನೀಡುತ್ತಾನೆ. ಅಧಿಕಾರಕ್ಕೆ ಬಂದ ಪಕ್ಷ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಲು ಪ್ರಯತ್ನಿಸುತ್ತದೆ.

     ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ಬೀಳುವ ಅಪಾಯ ಇಂದು ಎದುರಾಗಿದೆ. ಮತದಾರರನ್ನು ಸೆಳೆಯಲು ಪಕ್ಷಗಳು ನಾನಾ ರೀತಿಯ ಕಸರತ್ತುಗಳನ್ನು ಮಾಡಿ ಮತದಾನಕ್ಕೆ ಕರೆತರುತ್ತಾರೆ. ಇಂದು ಮತದಾರ ಮತದಾನದ ತನ್ನ ಹಕ್ಕು ಎಂಬುದನ್ನು ಮರೆತು ಹಣ, ಹೆಂಡ, ಉಡುಗೊರೆಗಳ ಆಮಿಷಕ್ಕೆ ಬಲಿಯಾಗಿ ತನ್ನ ಕರ್ತವ್ಯವನ್ನು ಮರೆಯುತ್ತಿದ್ದಾರೆ. ಅಧಿಕಾರ ಹಿಡಿಯುವುದಕ್ಕಾಗಿ ಅಭ್ಯರ್ಥಿಗಳು ಖರ್ಚು ಮಾಡಿದ ಸಂಪತ್ತನ್ನು ಮತ್ತೆ ಗಳಿಸಿಕೊಳ್ಳಲು ಐದು ವರ್ಷಪೂರ್ತಿ ಯೋಜನೆಗಳ ಹೆಸರಲ್ಲಿ  ಬೊಕ್ಕಸ ತುಂಬಿಸಿಕೊಳ್ಳುತ್ತಾರೆ.

     ಮತದಾರ ಪ್ರಾಮಾಣಿಕನಾಗಿದ್ದು ತನ್ನ ಮತವನ್ನು ಮಾರಿಕೊಳ್ಳದೆ ಚಲಾಯಿಸಿದ್ದಲ್ಲಿ ಅಭ್ಯರ್ಥಿಗಳನ್ನು ಪ್ರಶ್ನಿಸುವ ಅಧಿಕಾರವಿರುತ್ತದೆ. ಆದರೆ ಇಂದು ಜನ ಮತಕ್ಕಾಗಿ ಹಣ ಪಡೆದು ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಅದಕ್ಕಾಗಿ ಪ್ರಬುದ್ಧ ಮತದಾರ ಯಾವುದೇ ಆಮಿಷಕ್ಕೆ ಬಲಿಯಾಗದೆ ತನ್ನ ಕ್ಷೇತ್ರದ, ರಾಜ್ಯದ, ದೇಶದ ಅಭಿವೃದ್ಧಿಯ ಕನಸು ಕಂಡು ಯೋಗ್ಯರಿಗೆ ಅಧಿಕಾರವನ್ನು ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಯುವ ಸಮುದಾಯ ಮತದಾನದ ಮಹತ್ವವನ್ನು ಅರಿತು ತನ್ನ ಕುಟುಂಬ ಸಮುದಾಯದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರು ಮತದಾನ ಮಾಡುವಂತೆ ನೋಡಿಕೊಳ್ಳಬೇಕು.

ಅಮು ಭಾವಜೀವಿ

02052018

No comments:

Post a Comment