Friday, June 21, 2019

ಕನ್ನಡಾಂಬೆ ನಿನಗೆ ಮುಡಿಪು
ನನ್ನ ಈ ಕವನ ಕಂಪು

ಕರುನಾಡ ಸಿರಿಯನ್ನು
ಹೊತ್ತು ಸಾಗುವೆ ಕಾವೇರಿಯಂತೆ
ಕನ್ನಡದ ಹಿರಿಮೆಯ ಗಸ್ತು
ಕಾಯುವೆ ನಾಡ ಗಡಿಯಂತೆ

ನಾ ಅಲೆಯಾಗಿ ತೊಳೆವೆ
ಕನ್ನಡಾಂಬೆಯ ಪಾದ
ನಾ ಹಗಲಿರುಳು ಕಳೆವೆ
ಮಾಡುತ ಕನ್ನಡದ ಸಂವಾದ

ಮಲೆನಾಡ ಗಿರಿ ಶ್ರೇಣಿಗೆ
ಮುದ್ದಿಸುವೆ ಮೋಡದ ಮಳೆಹನಿಯಾಗಿ
ಕರಾವಳಿ ತೀರಕ್ಕೆ ಕಚಗುಳಿ
ಇಡುವೆ ಬದುಕುವ ಅಲೆಯಾಗಿ

ಈ ನಾಡ ಸಂಸ್ಕೃತಿಗೆ
ಕಿರಣವಾಗಿ ನಾ ಬೆಳಗುವೆ
ಈ ಭಾಷೆಯ ಉನ್ನತಿಗೆ
ಮರಣಿಸುವವರೆಗೂ ದುಡಿಯುವೆ

ಅನ್ನ ನೀಡಿದ
ಅಮ್ಮನಿಂದ ನುಡಿದ
ಅಮೃತದಂತಹ ಭಾಷೆಗೆ
ಅನುದಿನ ನಾ ಮಗುವಾಗಿರುವೆ

ಅಮುಭಾವಜೀವಿ

No comments:

Post a Comment