Saturday, June 22, 2019

ಅರಳುವ ಮುನ್ನವೇ

Saturday, November 4, 2017

ಕಥೆ

*ಅರಳುವ ತಾವರೆ* ಮುಂದುವರಿದ *ಭಾಗ ೪* ಸವಿತಾ ದುಃಖವನ್ನು ತಡೆದುಕೊಂಡು ನಡೆದ ಘಟನೆಯನ್ನೆಲ್ಲಾ ತಾಯಿಗೆ ವಿವರಿಸಿದಳು. ನೊಂದ ತನ್ನ ಹೆತ್ತವರನ್ನು ಸಮಾಧಾನಿಸುತ್ತಾ "ಅಪ್ಪ ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡಿ ನಿಮಗೆ ತುಂಬಾ ನೋವು ಕೊಟ್ಟು ಬಿಟ್ಟೆ" ಎಂದು ಗದ್ಗತಳಾದಳು. ಆ ಕಡೆಯಿಂದ ಅವಳ ತಂದೆ "ಅಲ್ಲ ಕಣೆ ಹುಚ್ಚುಡುಗಿ ನಿನಗೆ ಎಂಥಾ ನೋವಾಗಿದ್ದರೂ ನಾವು ನಿನ್ನ ಪರವಾಗಿ ಇರುತ್ತೇವೆ ಎಂಬುದನ್ನೇ ಮರೆತು ಮನೆ ಬಿಟ್ಟು ಹೋದರೆ ನಮ್ಮ ಗತಿ ಏನು ಅಂತ ಯೋಚನೆ ಮಾಡಿದ್ದೀಯಾ ? ನೋಡು ನಿಮ್ಮಮ್ಮ ಸರಿಯಾಗಿ ಊಟ ಮಾಡದೇ ಸೊರಗಿಹೋಗಿದ್ದಾಳೆ.ಒಬ್ಬಳೆ ಮಗಳು ಅಂತ ಸಾಕಿದ್ದಕ್ಕೆ ಒಳ್ಳೆಯ ಶಿಕ್ಷೆಯನ್ನೇ ಕೊಟ್ಟೆ ಬಿಡು " ಎಂದಾಗ 'ಸಾರಿ ಅಪ್ಪ ' ಎಂದಾಗ ""ಎಲ್ಲಿದ್ದೀಯ ಮಗಳೇ ಏನು ಮಾಡ್ತಾ ಇದೀಯಾ ಇಷ್ಟು ದಿನ ಹೇಗಿದ್ದೇ.ಬಂದು ಬಿಡು ಮಗಳೇ ನೀನು ಜೀವಂತವಾಗಿದ್ದೀಯಲ್ಲ ಅಷ್ಟೇ ಸಾಕು"" ಎಂದು ಹೆತ್ತವರಿಗೆ ಮಗಳು ಸಿಕ್ಕಿದ್ದು ಸಮಾಧಾನ ತಂದಿತ್ತು. ಅಪ್ಪ ನಾನು ಇಲ್ಲಿ ಅರಾಮಾಗಿ ಇದೀನಿ. ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಊರು ಬಿಟ್ಟು ಬಂದ ಮೇಲೆ ಸಾಯಲೆಂದು ತೀರ್ಮಾನಿಸಿದ್ದೆ. ಆದರೆ ಈ ಆಂಟಿ ನನಗೆ ಬುದ್ಧಿ ಹೇಳಿ ತಮ್ಮ ಮನೆಯಲ್ಲೇ ಆಶ್ರಯ ಕೊಟ್ಟು ಕೆಲಸ ಕೊಡಿಸಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ" ಎಂದು ಹೇಳುವಾಗ ಅವಳ ಹೃದಯ ತುಂಬಿ ಬಂತು. ಆ ರಾತ್ರಿ ಪೂರ್ತಿ ಅವಳಿಗೆ ತನ್ನ ಹೆತ್ತವರ ನೆನಪು ಕಾಡಿತು. ಅತ್ತ ಅವಳ ಹೆತ್ತವರು ತಮ್ಮ ಮಗಳು ಸಿಕ್ಕ ಸಮಾಧಾನದಲ್ಲಿ ನಿಟ್ಟುಸಿರು ಬಿಟ್ಟು ನೆಮ್ಮದಿಯಿಂದ ನಿದ್ರಿಸಿದರು.ಬೆಳಿಗ್ಗೆ ಜಾನಕಮ್ಮ ಸವಿತಾಳನ್ನು ಎಬ್ಬಿಸಲು ಬಂದಾಗ ಅವಳಿನ್ನು ಮಲಗಿದ್ದನ್ನು ಕಂಡು 'ಸವಿತಾ ಏಳಮ್ಮ ಹೊತ್ತಾಯ್ತು' ಎಂದು ಅವಳನ್ನು ಮುಟ್ಟಿ ಎಬ್ಬಿಸುವಾಗ ಅವರ ಕೈ ಹಿಡಿದು "ಅಮ್ಮ ನನ್ನನ್ನು ಕ್ಷಮಿಸಬಿಡು.ನಾನು ತಪ್ಪು ಮಾಡಿದೆ. ಅದಕ್ಕೆ ನಿಮಗೆ ಮುಖ ತೋರಿಸಲೂ ಆಗದೆ ನಿಮ್ಮನ್ನು ಬಿಟ್ಟು ಬಂದೆ" ಎನ್ನುವಾಗ ಅವಳ ಕಣ್ಣಲ್ಲಿ ಕಂಬನಿ ಬರುತ್ತಿದ್ದುದನ್ನು ಗಮನಿಸಿದ ಜಾನಕಮ್ಮ ಅವಳ ಹೆತ್ತವರನ್ನು ನೆನಪಿಸಿಕೊಂಡಿದ್ದಾಳೆಂದು ಅರ್ಥವಾಯಿತು. ಅವಳನ್ನು ಎಬ್ಬಿಸಿ ಕೂರಿಸಿ 'ನೋಡು ಮಗಳೆ ಹೇಗೋ ನಾಳೆ ರಜೆ ಇದೆ ನೀನು ಊರಿಗೆ ಹೋಗಿ ನಿಮ್ಮ ಅಪ್ಪ ಅಮ್ಮನನ್ನು ಭೇಟಿಯಾಗಿ ಬಾ ನಿನಗೂ ಸಮಾಧಾನ ಇರುತ್ತೆ ಅವರಿಗೂ ನೆಮ್ಮದಿ ಆಗುತ್ತೆ' ಎಂದಾಗ ಸವಿತಾ 'ಅಮ್ಮ ಒಂದು ಮಾತು,ನೀವು ನನಗೆ ಬದುಕನ್ನು ಕೊಟ್ಟ ದೇವತೆ. ನೀವು ಅಂಕಲ್ ಎಲ್ಲರೂ ಊರಿಗೆ ಹೋಗೋಣ. ನಿಮ್ಮನ್ನು ನನ್ನ ಹೆತ್ತವರಿಗೆ ಪರಿಚಯಿಸಬೇಕು' ಎಂದಾಗ ನಾವ್ಯಾಕೆ ಮಗಳೇ ನೀನೇ ಹೋಗಿಬಿಟ್ಟು ಬಾ .ಇನ್ನೊಮ್ಮೆ ಯಾವಾಗಲಾದರೂ ಹೋದರಾಯ್ತು ಎಂದರು ಜಾನಕಮ್ಮ. ಇಲ್ಲ ಅಮ್ಮ ಈಗಲೇ ಬನ್ನಿ ಅಂಕಲ್ಗೂ ಹೇಳಿ ಎಲ್ಲರೂ ಒಟ್ಟಿಗೆ ಹೋಗಿಬರೋಣ ಎಂದಾಗ ಸರಿ ಎಂದು ಒಪ್ಪಿಕೊಂಡು ಎದ್ದು ರೆಡಿಯಾಗಿ ಕೆಲಸಕ್ಕೆ ಹೋಗಿ ಬಾ ಎಂದು ಹೇಳಿ ಅಡುಗೆ ಮನೆಯತ್ತ ಹೊರಟು ಹೋದರು. ಮರುದಿನ ಸವಿತಾ ತನ್ನ ಹೆತ್ತವರನ್ನು ಕಾಣುವ ತವಕದಲ್ಲಿ ಬೇಗ ಬೇಗನೇ ಎಲ್ಲರ ತಯಾರಿ ಬಗ್ಗೆ ಕಾಳಜಿ ವಹಿಸಿ ಮೊದಲೇ ಬುಕ್ ಮಾಡಿದ ಟ್ಯಾಕ್ಸಿಯಲ್ಲಿ ಎಲ್ಲರೂ ಕೂತು ಪ್ರಯಾಣ ಬೆಳೆಸಿದರು. ಸವಿತಾ ಒಂದು ಕಡೆ ಅಪ್ಪ ಅಮ್ಮನನ್ನು ಬಿಟ್ಟು ಬಂದ ನೋವಿಗೆ ಕಣ್ಣೀರಾದರೆ ಇನ್ನೊಂದೆಡೆ ಇಷ್ಟು ದಿನ ಅವರನ್ನು ಬಿಟ್ಟಿದ್ದು ಈಗ ಅವರನ್ನು ಕಾಣುವ ಉತ್ಸಾಹದಲ್ಲಿ ತನ್ನ ತಂದೆ ತಾಯಿಗೆ ಹೊಸ ಬಟ್ಟೆ ತೆಗೆದುಕೊಂಡು ಖುಷಿಯಿಂದ ಹೋಗುತ್ತಿದ್ದಾಳೆ. ಅವಳ ಆ ಸಂಭ್ರಮಕ್ಕೆ ಪಾರವೇ ಇಲ್ಲ. ಕಾರು ವೇಗವಾಗಿ ಓಡುತ್ತಿದೆ.ಅವಳ ಜೀವನ ಕೂಡ ಎಷ್ಟು ವೇಗವಾಗಿ ಓಡಿ ಈಗ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಹಾಗೆ ಅವಳ ಸ್ಮೃತಿ ಪಟಲದಲ್ಲಿ ನಡೆದ ಎಲ್ಲ ಘಟನೆಗಳು ಬಂದು ಹೋದವು. ಕಾರು ಬಂದು ಮನೆ ಮುಂದೆ ನಿಂತಾಗ ಮನೆಯ ಒಳಗಿನಿಂದ 'ಯಾವುದೋ ಕಾರು ಬಂದು ನಿಂತಂತಾಯ್ತು ಸ್ವಲ್ಪ ನೋಡ್ರಿ' ಎಂದಾಗ ಸವಿತಾಳ ಅಪ್ಪ ಹೊರಗೆ ಬಂದು ನೋಡಲು ಸವಿತಾ ಬಂದದ್ದು ಕಂಡು ಓಡಿ ಬಂದು ಮಗಳನ್ನು ಆಲಂಗೀಸಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದರು. ಲೇ ಎನೇ ನಮ್ಮ ಮಗಳು ಬಂದ್ಬಿಟ್ಳು ಕಣೇ ಬೇಗ ಬಾರೆ ಎಂದು ಖುಷಿಯಿಂದ ತನ್ನ ಮಡದಿಯನ್ನು ಕರೆದಾಗ ಕರುವನ್ನು ಕಳೆದುಕೊಂಡು ಪರದಾಡುತ್ತಿದ್ದ ಹಸುವಂತಾಗಿದ್ದ ಶಾರದಮ್ಮನವರು ಓಡೋಡಿ ಬಂದು ಅಂಗಳದಲ್ಲಿಯೇ ಅವಳನ್ನು ಮುದ್ದಿಸುತ್ತಾ ಬಂದ್ಯಾ ನನ್ತಾಯೀ ಎಷ್ಟು ಸೊರಗಿಹೋಗಿದಿಯಲ್ಲೇ.ಹೋಗೋ ಮುಂಚೆ ಈ ಪಾಪಿ ಅಮ್ಮನ ನೆನಪು ಬರಲಿಲ್ಲ್ವೇನೇ ನಿಂಗೆ ಎನ್ನುತ್ತಾ ಜಾನಕಮ್ಮ ಅವರಿಗೆ ಕೈ ಮುಗಿದು ನನ್ನ ಮಗಳನ್ನು ಉಳಿಸಿಕೊಟ್ಟ ದೇವತೆ ನೀವು ಎಂದಾಗ ಅಯ್ಯೋ ಅಷ್ಟು ದೊಡ್ಡ ಮಾತು ಬೇಡ. ನನ್ನ ಮಗಳು ಅಂತ ಬುದ್ಧಿ ಹೇಳಿ ಬದುಕುವ ಭರವಸೆಯನ್ನು ನೀಡಿದೆವು ಅಷ್ಟೇ. ನಿಮ್ಮ ಮಗಳು ಜಾಣೆ. ಹೇಳಿದನ್ನು ಅರ್ಥ ಮಾಡಿಕೊಂಡು ಬದುಕಿನಲ್ಲಿ ಹೊಸ ಭರವಸೆ ಮೂಡಿಸಿಕೊಂಡು ನಿಮ್ಮ ಮುಂದೆ ಮತ್ತೆ ನಿಮ್ಮ ಮಗಳಾಗಿ ಬಂದು ನಿಂತಿದ್ದಾಳೆ ಇನ್ನು ನಮ್ಮ ಜವಾಬ್ದಾರಿ ಮುಗಿತು ಎಂದು ಜಾನಕಮ್ಮ ಹೇಳಲು ಅದು ಹೇಗೆ ಮುಗಿತದೆ ಈಗ ಶುರುವಾಗಿದೆ. ನನ್ನ ಮಗಳು ಪುಣ್ಯ ಮಾಡಿದ್ದಾಳೆ. ಅವಳಿಗೆ ಇಬ್ಬರು ಅಮ್ಮಂದಿರು ಸಿಕ್ಕಿದ್ದಾರೆ ಎಂದು ಹೇಳುತ್ತಾ ಎಲ್ಲರೂ ಮನೆಯೊಳಗೆ ಹೋದರು. ಮುಂದುವರೆಯುವುದು.......

No comments:

Post a Comment