ಕಲ್ಪವೃಕ್ಷವೆಂದೇ ಹೆಸರಾದ ಸವಣೂರಿನ ದೊಡ್ಡ ಹುಣಸೆ ಮರದ ಸಾನಿಧ್ಯದಲ್ಲಿ ಕವಿವೃಕ್ಷ ಬಳಗ ತನ್ನದೇ ಆದ ರೀತಿಯಲ್ಲಿ ಕನ್ನಡ ಮನಸ್ಸುಗಳನ್ನು ಒಂದೆಡೆ ಸೇರಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ರೀತಿ ತುಂಬಾ ಶ್ಲಾಘನೀಯವಾದದ್ದು. ಇದಕ್ಕಾಗಿ ಶ್ರಮಿಸಿದ ವೀರೇಶ್ ಹಿತ್ತಲಮನಿ ಸರ್ ಹಾಗೂ ಅವರ ಬಳಗ ನಿಜಕ್ಕೂ ಅಭಿನಂದನಾರ್ಹರು.
ನಾಡಿನ ವಿವಿಧ ಮೂಲೆಗಳಿಂದ ಬಂದಿದ್ದ ಕವಿಮನಸ್ಸುಗಳಿಗೆ, ಸಾಹಿತ್ಯಪ್ರಿಯರಿಗೆ ಈ ದಿನ ನಿಜಕ್ಕೂ ಸಂಭ್ರಮದ ದಿನವಾಗಿತ್ತು. ದಿನವಿಡೀ ನಡೆದ ಕಾರ್ಯಕ್ರಮ ಅವಿಸ್ಮರಣೀಯವಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳ ಭಾಷಣ ಕಾವ್ಯಾಸಕ್ತರಿಗೆ ರಸದೌತಣ ಬಡಿಸಿತು. ಅದರಲ್ಲೂ ವಿಶೇಷವಾಗಿ ಮಕಾನದಾರ ಸರ್, ಸತೀಶ್ ಜವರೇಗೌಡ ಸರ್, ಪ್ರಕಾಶ್ ಖಾಡೆ ಸರ್ ಅವರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವಾರು ಹಿರಿಯರ ಮಾರ್ಗದರ್ಶನ ನಮಗೆಲ್ಲಿ ಸಿಕ್ಕಿತು. ಕಾರ್ಯಕ್ರಮದುದ್ದಕ್ಕೂ ವೀರೇಶ್ ಅವರ ಲವಲವಿಕೆಯ ಓಡಾಟ ನಮಗಂತೂ ತುಂಬಾ ಇಷ್ಟವಾಯಿತು ಒಂದೇ ನಿಮಿಷದಲ್ಲಿ 10 ಗ್ರಂಥಗಳನ್ನು ಬಿಡುಗಡೆಗೊಳಿಸಿದ್ದು ಸಾಮಾನ್ಯ ವಿಚಾರವಲ್ಲ. ಕವಿ ವೃಕ್ಷ ಬಳಗವನ್ನು ರಾಜ್ಯಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳ ಅಧ್ಯಕ್ಷರ ಆಯ್ಕೆ ಹಾಗೂ ಅವರನ್ನು ಸನ್ಮಾನಿಸಿದ ರೀತಿ ವಿಶೇಷವಾಗಿತ್ತು. ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕವಿವೃಕ್ಷ ಬಳಗದ ಈ ಕಾರ್ಯ ಕನ್ನಡ ಸಾಹಿತ್ಯದಲ್ಲಿ ದಿಟ್ಟ ಹೆಜ್ಜೆ ಎಂದೇ ಹೇಳಬೇಕು.
ಶರಣರ ನಾಡಿನಲ್ಲಿ ಕಲ್ಮಠದ ಅಂಗಳದಲ್ಲಿ ಕಳೆದ ಕ್ಷಣಗಳು ಮರೆಯಲಾರದಂಥವು . ಅಲ್ಲಿ ನೆರೆದಿದ್ದ ಕಾವ್ಯಾಸಕ್ತರು ಹಳಬರ ಹಸ್ತಲಾಘವ, ಹೊಸಬರ ಪರಿಚಯ, ತಮ್ಮ ಸಾಧನೆಗಳ ಅನುಭವಗಳ ವಿನಿಮಯ, ಪುಟಾಣಿ ಮಕ್ಕಳ ನೃತ್ಯ ಹಾಗೂ ಭರತನಾಟ್ಯ ಆಹ್ಲಾದವನ್ನು ಉಂಟು ಮಾಡಿತ್ತು. ಅದರೊಂದಿಗೆ ಪಾಯಸದ ಸವಿ ಬಾಯಿ ಚಪ್ಪರಿಸುವಂತೆ ಮಾಡಿತ್ತು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳ ಕಾವ್ಯ ಲಹರಿ ಮನಸ್ಸಿಗೆ ಮುದ ನೀಡಿತು. ಕನ್ನಡ ಸಾಹಿತ್ಯ ವೃಕ್ಷ ಹೆಮ್ಮರವಾಗಿ ಬೆಳೆಯಲು ಬೀಜಾಂಕುರ ಮಾಡಿಸಿದ ವೇದಿಕೆ ನಮ್ಮ ಕವಿ ವೃಕ್ಷಬಳಗ.
ಸುಮಾರು ದಿನಗಳಿಂದ ಬಳಗದಲ್ಲಿ ನಡೆಯುತ್ತಿದ್ದ ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕೀರ್ತಿ ವೀರೇಶ್ ಹಿತ್ತಲಮನಿಯವರದು. ಇಂಥ ಒಂದು ಕುಟುಂಬ ವಾತಾವರಣವಿರುವಂತಹ ಬಳಗ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ನಿಜಕ್ಕೂ ಇದರ ಒಂದು ಭಾಗವಾಗಿರುವುದು ನಮಗೂ ಕೂಡ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಬಳಗ ವೀರೇಶ್ ಸರ್ ಅವರ ನೇತೃತ್ವದಲ್ಲಿ ಇನ್ನಷ್ಟು ಪ್ರಬುದ್ಧಮಾನಕ್ಕೆ ಬರುವಂತಾಗಲಿ ಕನ್ನಡ ಸಾಹಿತ್ಯ ಇನ್ನಷ್ಟು ಒಳ್ಳೆಯ ಪ್ರತಿಭೆಗಳನ್ನು ಪಡೆಯುವಂತಾಗಲಿ ಎಂದು ಆಶಿಸುತ್ತಾ, ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸೋಣ.
ಅಮು ಭಾವಜೀವಿ
No comments:
Post a Comment