Friday, June 21, 2019

ಒಲವಿನ ಚಂದನ

ಮುಂದುವರೆದ ಭಾಗ 4

ಆಕಾಶ್ ಇನ್ನು ಬ್ಯಾಚುಲರ್. ಅವನು ಒಬ್ಬನೇ ಇದ್ದಾನೆ ಅಂತ ಎಲ್ಲರಿಗೂ ಗೊತ್ತು . ಕಚೇರಿಯಲ್ಲಿ ಕೆಲಸ ಮಾಡುವವರಲ್ಲ ಅದೇ ಊರಿನವರೇ ಆಗಿದ್ದರಿಂದ ಅವರೆಲ್ಲ ಮನೆಯಿಂದಲೇ ಊಟ ತರುತ್ತಿದ್ದರು. ಎಷ್ಟೋ ಸರಿ ಅವರೆಲ್ಲಾ ಆಕಾಶನನ್ನು ಕುರಿತು ." ಆಕಾಶ್ ನಾವೆಲ್ಲರೂ ಇರುವಾಗ ನೀನು ಮಧ್ಯಾನ್ಹವೂ ಹೋಟೆಲ್ನಿಂದ ತಂದ ಊಟವನ್ನೇ ಮಾಡಬೇಕಾ" ಎಂದು ಅವರೆಲ್ಲರೂ ತಾವು  ತಂದಿರುವುದರಲ್ಲಿಯೇ ಸ್ವಲ್ಪ ಅವನಿಗೂ ಕೊಟ್ಟು ಊಟ ಮಾಡುತ್ತಿದ್ದರು. ಆಕಾಶ್  ತುಂಬಾ ಸ್ವಾಭಿಮಾನಿ . ಆದರೂ ತನ್ನ ಸಹೋದ್ಯೋಗಿಗಳ ಪ್ರೀತಿಗೆ ಅಭಿಮಾನಕ್ಕೆ ಮಣಿಯಲೇ ಬೇಕಾಗುತ್ತಿತ್ತು.

     ಚಂದನ ಅವಳ ಗೆಳತಿಯರಾದ ಶ್ರುತಿ, ಶ್ರೀಮತಿ,ಸುರತ ಮುಂತಾದವರೆಲ್ಲ ಇನ್ನೊಂದು ಕಡೆ ಕುಳಿತು ಊಟಮಾಡುತ್ತಾ ಅವರೆಲ್ಲಾ  ಆಕಾಶನನ್ನು ಒತ್ತಾಯಿಸುತ್ತಿರುವುದನ್ನು ನೋಡಿ ನಗುತ್ತಿದ್ದರು. ಚಂದನಳಂತೂ "" ಅವನಿಗೆ ಏನು ಕಡಿಮೆ ಆಗಿದೆ, ಇವರೇಕೆ ಅವನನ್ನು ಅಷ್ಟೊಂದು ಒತ್ತಾಯ ಮಾಡಬೇಕು. ಒಮ್ಮೆ ಕರೆದು ಸುಮ್ಮನಾಗಬೇಕು, ಅದನ್ನು ಬಿಟ್ಟು ಇವರು ಅವನನ್ನು ಒತ್ತಾಯಿಸುತ್ತಿರುವುದನ್ನು ನೋಡಿದರೆ ಯಾಕೋ ಅತಿಯಾಯಿತು ಅನಿಸುತ್ತಿದೆ" ಎನ್ನಲು ಅವಳ ಗೆಳತಿಯರೆಲ್ಲ ಅವಳ ಮಾತಿಗೆ ಎದುರಾಡಲಾಗದೆ ಸುಮ್ಮನೆ ತಮ್ಮ ಪಾಡಿಗೆ ತಾವು ಊಟ ಮಾಡಿ ಮುಗಿಸಿದರು. ಅದರಲ್ಲಿ ಶೃತಿ ಸ್ವಲ್ಪ ಧೈರ್ಯ ಮಾಡಿ " ಅಲ್ಲ ಕಣೇ ಚಂದು, ಆಕಾಶ್ ತುಂಬಾ ಒಳ್ಳೆಯವರು. ಅವರು  ಯಾರನ್ನೂ ಎಂದೂ ನೋಯಿಸಿದವರಲ್ಲ. ಅದೂ ಅಲ್ಲದೆ ನಮ್ಮ ಕಂಪನಿಯಲ್ಲಿ ‌ ಒಳ್ಳೆಯ ಸ್ನೇಹಿತ ಕೂಡ. ಎಲ್ಲರ ಕೆಲಸಗಳಲ್ಲೂ ಸಹ ಭಾಗಿಯಾಗುತ್ತಾರೆ. ಎಲ್ಲರಿಗೂ ಕೆಲಸದ ಬಗ್ಗೆ ಸಲಹೆ ಕೊಡುತ್ತಾರೆ ,ಎಲ್ಲರ ನೋವುಗಳಿಗೂ ಸ್ಪಂದಿಸುತ್ತಾರೆ. ಅಂಥವರ ಮೇಲೆ ಏಕೆ ನೀನು ರೇಗಾಡ್ತೀಯಾ, ಅಂತಹ ಒಳ್ಳೆಯ ಮನುಷ್ಯ ನಮ್ಮ ಜೊತೆಯಲ್ಲಿರುವುದು ನಮ್ಮ ಪುಣ್ಯವೇ ಹೌದು" ಎನ್ನಲು ತಲೆ ಆಡಿಸುವ ಮೂಲಕ ಅವಳ ಮಾತನ್ನು ಒಪ್ಪಿದರೆ ಚಂದನ ಮಾತ್ರ ಮುಖ ಗಂಟಿಕ್ಕಿಕೊಂಡು " ಸಾಕು ಸುಮ್ನಿರೆ, ಅವನೇನು ಮೋಹ. ಎಲ್ಲರೂ ಒಟ್ಟಿಗೆ ಕೆಲಸ ಮಾಡುವ ಜಾಗದಲ್ಲಿ ಒಬ್ಬರಿಗೊಬ್ಬರು ಸಹಕಾರದಿಂದ ಇರುವುದು ಸಾಮಾನ್ಯ. ಅದನ್ನೇ ನೀವೆಲ್ಲ ದೊಡ್ಡದಾಗಿ ಕಥೆಕಟ್ಟಿ ನನ್ನ ಮುಂದೆ ಹೇಳುತ್ತೀರಲ್ಲಾ. ಅಲ್ಲ ಕಣ್ರೇ ಅವನು ಎಂದಾದರೂ ನಿಮ್ಮನ್ನು ಹೋಟೆಲಿಗೆ ಕರೆದುಕೊಂಡು ಹೋಗಿದ್ದಾನೆಯೇ? ಏನು ಇಲ್ಲ ಅಂತಹವನ ಮೇಲೆ ಏಕೆ ನಿಮಗೆ ಇಷ್ಟೊಂದು ಅಭಿಮಾನ". ಅವಳು ಮಾತು ಮುಗಿಸುವ ಮೊದಲೇ ಸುರತಿ " ಲೇ ಚಂದನ ನೀನು ಅವನ ಬಗ್ಗೆ ತಪ್ಪು ತಿಳಿದುಕೊಂಡಿದ್ದಿಯ. ಹೋಟೆಲಿಗೆ ಕರೆದುಕೊಂಡು ಹೋಗಿ ಎಲ್ಲಾ ತಿಳಿಸಿಬಿಟ್ಟರೆ ಒಳ್ಳೆಯವನು ಅಂತಾನ ನಿನ್ನ ಅರ್ಥ. ಅಲ್ಲ ಕಣೇ ಅವನ ಮಾತಿನಲ್ಲಿ ಅದಕ್ಕಿಂತಲೂ ರುಚಿಯಾದ ಸವಿಯಿದೆ ಕಣೆ. ಆ ಮಾತಿನ ನಯ ವಿನಯ, ಸದಾ ನಗುಮುಖದಿಂದಿರುವ ಅವನನ್ನು ನೋಡಿದರೆ ಯಾರಿಗೂ ಅವನನ್ನು ದ್ವೇಷಿಸುವ ಮನಸ್ಸಾಗುವುದಿಲ್ಲ. ಅಂತದ್ರಲ್ಲಿ ನಿನಗೇಕೆ ಅವನ ಮೇಲೆ ನಿನಗೇಕೆ ಅಷ್ಟೊಂದು ಸಿಟ್ಟು" ಎನ್ನುತ್ತಿದ್ದಂತೆಯೇ ಅವಳ ಕೋಪ ನೆತ್ತಿಗೇರಿ ನೀವೆಲ್ಲ ಹೀಗೆ ಅವನನ್ನು ಹೊಗಳಿ ಹೊಗಳಿ ಈ ಮಟ್ಟಕ್ಕೆ  ಹೋಗಿದ್ದಾನೆ. ಏನೂ ಇಲ್ಲ ಅವನ ಕೈಯಲ್ಲಿ ಇರೋದು ಎಂದು ತಿಳ್ಕೊಂಡಿದ್ದಾನಾ? "ಬೆಳಗ್ಗೆ ನಿನ್ನನ್ನು ಎಷ್ಟು ಸತಾಯಿಸಿದ ಎಂದು ಕೆಂಡಾಮಂಡಲವಾದಳು.

    ನೀನು ಅವನ ಮನಸ್ಸನ್ನು ಅರ್ಥಮಾಡಿಕೊಂಡಿಲ್ಲ ಕಣೆ . ಬೆಳಿಗ್ಗೆ ಸುರತಿ ಅಳುವಾಗ ಅವನ ಕಣ್ಣಲ್ಲೂ ನೀರಿತ್ತು ನೀನು ಅದನ್ನು ಗಮನಿಸಿಲ್ಲ. ಸದಾ ಅವನ ಬಗ್ಗೆ ಸಿಡುಕುವ ನಿನಗೆಲ್ಲಿ ಅದು ಕಾಣುತ್ತೆ.  ನಿಮ್ಮಂಥವರಿಗೆ ಎಲ್ಲಾ ಅದೆಲ್ಲಿ ತಿಳಿಯುತ್ತೆ. ಬರೀ ಮೇಲ್ನೋಟಕ್ಕೆ ನೋಡಿ ಯಾವುದೇ ಮನುಷ್ಯನ ವ್ಯಕ್ತಿತ್ವವನ್ನು ಅಳೆಯಬಾರದು. ನಿಜ ಏನು ಅಂತ ತಿಳಿದುಕೋ ಮೊದಲು ಆಗ ನೀನೇ ಅವನಿಗೆ  ಮನಸೋತು ಅವನ ಹಿಂದಿಂದೆ
ಸುತ್ತಾಡ್ತೀಯಾ". ಎಂದ ಸುಮತಿಯನ್ನು ಕೆಕ್ಕರಿಸಿ ನೋಡಿ "ಸಾಕು ಮಾಡ್ರಿ ನಿಮ್ಮ ವೇದಾಂತವನ್ನು. ಏನೋ ಗೆಳತಿಯರು ಅಂತ ಸುಮ್ನಿದ್ರೆ ಏನೇನೋ ಮಾತಾಡ್ತೀರಾ. ಏನೇ ಇದೇ ಅವನ ಹತ್ತಿರ. ನೋಡೋಕೆ ಅವನೇನು ಸುಂದರನಲ್ಲ. ಅವನಲ್ಲಿ ಸ್ಟಾಂಡರ್ಡ್ ಲೈಫ್ ನ ಲಕ್ಷ್ಣನೇ ಇಲ್ಲ. ಒಳ್ಳೇ ಹಳ್ಳಿ ಗಮಾರರಂತೆ ಇರುತ್ತಾನೆ . ಮಾಡ್ರನ್ ಹುಡುಗರ ಹಾಗೆ dress ಮಾಡ್ಕೊಳ್ಳಲ್ಲ, ಓಡಾಡುವುದಕ್ಕೆ ಅಂತ ಒಂದು ಬೈಕೂ ಇಲ್ಲ. ಬಸ್ಸಲ್ಲಿ ಬರ್ತಾನೆ ಬಸ್ಸಲ್ಲಿ ಹೋಗ್ತಾನೆ, ಅಂಥವನನ್ನು ಇವೆಲ್ಲ ಮನ್ಮಥ , ರಾಜಕುಮಾರ ಅಂತಲ್ಲ ಹೊಗಳುತ್ತೀರಲ್ಲಅವನೇನೇ ನಿಮಗೆ  ಕೊಟ್ಟಿದ್ದಾನೆ. ಎನ್ನುತ್ತಿದ್ದಂತೆ ಅವನು ನನಗೆ ನಿಷ್ಕಲ್ಮಶವಾದ ಸ್ನೇಹವನ್ನು ಕೊಟ್ಟಿದ್ದಾನೆ. ಅದರ ಬೆಲೆ ನಿನಗೇನು ಗೊತ್ತು. ಅವನ ಮೇಲೆ  ರೇಗುವುದನ್ನು ಬಿಟ್ಟು ಸ್ವಲ್ಪ ಯೋಚನೆ ಮಾಡಿ ನೋಡು, ಆಗ ನಿನಗೆ ಗೊತ್ತಾಗುತ್ತೆ ಅವನ ವ್ಯಕ್ತಿತ್ವ ಎಂಥದ್ದು ಅಂತ. ಎಂದು ಆವೇಶಭರಿತ ಅಭಿಮಾನದ ಮಾತುಗಳನ್ನಾಡಿದಳು ಶೃತಿ. "ಅವನು ತುಂಬಾ ಕಷ್ಟದಿಂದ ಬೆಳೆದು ಬಂದಿದ್ದಾನೆ. ಜೀವನ ಅಂದ್ರೆ ಏನು ಅಂತ ತಿಳ್ಕೊಂಡಿದ್ದಾನೆ. ಇನ್ನೊಬ್ಬರ ಕಷ್ಟವನ್ನು ಅರ್ಥ ಮಾಡ್ಕೊತಾನೆ" ಎನ್ನುತ್ತಿದ್ದಂತೆ " ನಾವೇನು ಕಷ್ಟವನ್ನೇ ಕಂಡಿಲ್ಲ ಅಲ್ವಾ ?" ಎಂದಳು ಚಂದನ .

   ಹಾಗಲ್ಲ ಕಣೇ ನಾವು ಹೇಳಿದ್ದು. ಅವನ ತಂದೆ ತಾಯಿ ತುಂಬಾ ಬಡವರು. ಹಳ್ಳಿಯಲ್ಲಿ ಕೂಲಿ ಮಾಡಿ ಬದುಕುತ್ತಿದ್ದಾರೆ. ತನ್ನ ಮಗನನ್ನು ಕಷ್ಟಪಟ್ಟು ಓದಿಸಿ ಈ ಮಟ್ಟಕ್ಕೆ ತಂದಿದ್ದಾರೆ. ಈಗ ಅವನು ಕೆಲಸಕ್ಕೆ ಸೇರಿ ಕೈತುಂಬಾ ಸಂಬಳ ತೆಗೆದುಕೊಳ್ಳುತ್ತಿದ್ದೇನೆ ಅಂತ ಹಿಂದಿನದನ್ನೆಲ್ಲ ಮರೆತು ಶೋಕಿ ಮಾಡುವುದಕ್ಕೆ ಆಗುತ್ತಾ? ಅವನು ಇಲ್ಲಿ ತನ್ನ ಖರ್ಚನ್ನು ನೋಡ್ಕೊಬೇಕು, ಹಳ್ಳಿಯಲ್ಲಿರುವ ತಂದೆ-ತಾಯಿಗೂ ಹಣ ಕಳಿಸಬೇಕು. ನಿನಗೇನಮ್ಮ ನಿಮ್ಮಪ್ಪ ದೊಡ್ಡ ಕೆಲಸದಲ್ಲಿದ್ದಾರೆ . ಮನೆಯ ಖರ್ಚನ್ನೆಲ್ಲ ಅವರೇ ನಿಭಾಯಿಸುತ್ತಾರೆ. ನಿನ್ನ ಖರ್ಚಿಗೆ ಸಂಬಳ ಬರ್ತಿದೆ. ಅದರಲ್ಲಿ ನೀನ  ಮಜಾ ಮಾಡ್ತೀಯಾ. ಹಣದ  ಮಹತ್ವ ನಿನಗೆ ಗೊತ್ತಾಗುವುದಿಲ್ಲ. ಕಷ್ಟದಲ್ಲಿರುವವರಿಗೆ 1 ರೂಪಾಯಿನೂ ಲೆಕ್ಕ. ಸುಮ್ಮನೆ ಅಹಂಕಾರದಿಂದ ಮಾತನಾಡುವುದನ್ನು ಬಿಟ್ಟು ಅವನ ಸ್ಥಾನದಲ್ಲಿ ನಿಂತು ಯೋಚಿಸು ಆಗ ನಿನಗೆ ಎಲ್ಲಾ ತಿಳಿಯುತ್ತೆ. ಎಂದಾಗ " ಅಯ್ಯೋ ನನ್ನ ತಲೇ ಚಿಟ್ಟಿಡಿತಾ ಇದೆ. ಸಾಕು ನಿಮ್ಮ ಆಕಾಶಯಣ. ಎನ್ನುತ್ತಾ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ತೆರಳಿದರು.

ಮುಂದುವರಿಯುವುದು.......

No comments:

Post a Comment