Friday, June 21, 2019

ಮರೆಯಾಗುತ್ತಿರುವ ಪತ್ರ ಸಂಸ್ಕೃತಿ

ಹಿಂದಿನ ಕಾಲದ ಜನರ ಪ್ರಬಲ ಸಂಪರ್ಕ ಮಾಧ್ಯಮ ಎಂದರೆ ಓಲೆಗಳು. ತಾಳೆಗರಿಗಳಲ್ಲಿ, ಚರ್ಮದ ಹಾಳೆಗಳಲ್ಲಿ , ಬಟ್ಟೆಗಳ ಮೇಲೆ, ಮನದ ಭಾವನೆಗಳನ್ನು ಬರೆದು ತಮ್ಮ ಪ್ರಿಯವಾದವರಿಗೆ, ರಾಜರಿಗೆ, ಸಮಾಜದ ವಿವಿಧ ವ್ಯಕ್ತಿಗಳಿಗೆ ವೈವಿದ್ಯಮಯವಾದ ಪತ್ರಗಳನ್ನು ಬರೆದು ಪಾರಿವಾಳ , ಕುದುರೆ, ಆಳುಗಳ ಮುಖಾಂತರ ಸಂವಹನ ಕ್ರಿಯೆ ನಡೆಯುತ್ತಿತ್ತು.

   ಪತ್ರ ಲೇಖನ ಒಂದು ಕಲೆ. ತನ್ನವರಿಗೆ ತನ್ನ ಮನದ ಭಾವನೆಗಳನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸಲು ಇದ್ದ ಮಾಧ್ಯಮ. ಅಷ್ಟೇ ಅಲ್ಲ ಪತ್ರ ಬರೆಯುವಾಗ ಅನುಸರಿಸುತ್ತಿದ್ದ ರೀತಿನೀತಿಗಳು ಆ ಪತ್ರದೊಳಗಿನ ಮಾಹಿತಿ ಸೋರಿಕೆಯಾಗದಂತೆ ವಹಿಸುತ್ತಿದ್ದ ಎಚ್ಚರಿಕೆ, ಪತ್ರಕ್ಕಾಗಿ ಕಾದು ಕುಳಿತುಕೊಳ್ಳುತ್ತಿದ್ದ ಆ ಕಾತರ ಇಂದಿನ ದಿನಗಳಲ್ಲಿ ಕಾಣುತ್ತಿಲ್ಲ. ಪತ್ರಗಳು ನಮ್ಮ ಮನದ ಭಾವನೆಗಳನ್ನು ಇನ್ನೊಬ್ಬರಿಗೆ ಮನಮುಟ್ಟುವಂತೆ ಬರೆಯುವ ಕೌಶಲ್ಯವನ್ನು ಮೂಡಿಸುತ್ತಿದ್ದ ಒಂದು ಸೃಜನಾತ್ಮಕ ಅಭಿವ್ಯಕ್ತಿಯಾಗಿತ್ತು. ಪತ್ರ ಓದುತ್ತಿರುವವನಿಗೆ ಯಾರು ಪತ್ರ ಬರೆದಿರುವರೋ ಅವರೊಂದಿಗೆ ಅತ್ಯಂತ ಆತ್ಮೀಯವಾಗಿ ನಿಕಟವರ್ತಿಗಳಾಗಿ ವ್ಯವಹರಿಸುವ ರೀತಿಯಲ್ಲಿ ಬರೆಯುತ್ತಿದ್ದರು. ಈ ಕ್ರಿಯೆ ಇಬ್ಬರಲ್ಲೂ ಅತ್ಯಂತ ಆಪ್ಯಾಯಮಾನವಾದ ಸಂಬಂಧವನ್ನು ಬೆಸೆಯುತ್ತಿತ್ತು.

     ಪತ್ರಗಳು ಕೇವಲ ಭಾವನೆಗಳ ಹಂಚಿಕೆಗೆ ಮಾತ್ರ ವೇದಿಕೆಯಾಗಿರದೆ, ತಮ್ಮ ಕಷ್ಟ ಸುಖ , ನೋವು ನಲಿವು, ಸಮಾಜದ ಆಗುಹೋಗುಗಳು, ಬದುಕಿನ ಚಿಂತನೆಗಳು, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರೋಪಾದಿಯಲ್ಲಿ ರೂಪುಗೊಳ್ಳುತ್ತಿದ್ದವು. ಈ ಪತ್ರಗಳು ಆ ಇಬ್ಬರ ನಡುವಿನ ಅವಿನಾಭಾವ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಮುಖ ಅಂಶವಾಗಿತ್ತು. ಪತ್ರ ವ್ಯವಹಾರ ನಡೆಸುವಾಗ ಒಂದು ದಿನ ತಡವಾದರೂ ಪತ್ರಕ್ಕಾಗಿ ಕಾಯುತ್ತಿರು, ಚಡಪಡಿಸುವ ರೀತಿಯನ್ನು ಮಾತಿನಲ್ಲಿ ಹೇಳಲಾಗುವುದಿಲ್ಲ. ಎಷ್ಟು ಬಾರಿ ಅಂಚೆಯವನನ್ನು ಕಾಡಿ ಬೇಡಿ ಅವನ ಕೈಕಾಲು ಹಿಡಿದು ಪತ್ರಗಳನ್ನು ಕಳಿಸುವ ಹಾಗೂ ಪಡೆಯುವ ಪ್ರಕ್ರಿಯೆಯಲ್ಲಿ ವಹಿಸುತ್ತಿದ್ದ ಕಾಳಜಿಯನ್ನು ಅನುಭವಿಸಿಯೇ ತಿಳಿಯಬೇಕು.

      ಪತ್ರಗಳು ಕೇವಲ ಆ ಹೊತ್ತಿನ ಇಬ್ಬರ ಭಾವನೆಗಳ ಹಂಚಿಕೆಯಾಗಿರದೆ, ಅವು ಆ ಸಮಾಜದ, ಸಮಯದ, ಜನರ ಮನಸ್ಥಿತಿಯನ್ನು ಅರಿಯುವ ದಾಖಲೆಗಳಾಗಿ ಉಳಿದಿವೆ. ಸ್ವಾತಂತ್ರ್ಯ ಹೋರಾಟಗಾರರು ಹೊಸ ಹೊಸ ತಂತ್ರಗಾರಿಕೆಯ ಬಗ್ಗೆ ಇರಬಹುದು ಜನಸಾಮಾನ್ಯರ ಕುಂದುಕೊರತೆಗಳನ್ನು ಸರ್ಕಾರಕ್ಕೆ ಆಡಳಿತಗಾರರಿಗೆ ಅರ್ಥಮಾಡಿಸುವ, ಸರ್ಕಾರದ ಪರ ವಿರೋಧಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಸಂಘಸಂಸ್ಥೆಗಳ ಸದಸ್ಯರಲ್ಲಿ, ಒಗ್ಗಟ್ಟನ್ನು ಬೆಸೆದು ಕಾರ್ಯಪ್ರವೃತ್ತರಾಗಲು, ಒಬ್ಬ ಪ್ರೇಮಿಯು ತನ್ನ ಪ್ರೇಮಿಗೆ ಮನದ ಭಾವನೆಗಳನ್ನು ತನ್ನದೇ ಶೈಲಿಯಲ್ಲಿ ಅಗಾಧ ಪ್ರೀತಿಭರಿತ ಸಾಲುಗಳಿಗೆ ಸಾಕ್ಷಿಯಾಗುತ್ತಿದ್ದವು. ಹೆತ್ತವರು ಮಕ್ಕಳಿಗೆ, ಮಕ್ಕಳು ಹೆತ್ತವರಿಗೆ, ಸೋದರ ಸೋದರಿಯರಿಗೆ, ಗೆಳೆಯ ಗೆಳತಿಯರಿಗೆ,, ಬರೆಯುವ ಪತ್ರಗಳು ತನ್ನದೇ ಆದ ಮೌಲ್ಯಗಳನ್ನು ಬಿಂಬಿಸುವ ಪ್ರಮುಖ ಆಕರ ಗಳಾಗಿದ್ದವು. ಪತ್ರಗಳು ಪರಸ್ಪರರಲ್ಲಿ ಎಷ್ಟು ಆತ್ಮೀಯ ಸಂಬಂಧವನ್ನು ಬೆಸೆದಿತ್ತು ಎಂಬುದನ್ನು ಆ ಪತ್ರಗಳ ಒಕ್ಕಣೆಯಿಂದಲೇ ಗ್ರಹಿಸಬಹುದಾಗಿತ್ತು.

      ಪತ್ರಗಳು ಕೇವಲ ಅಕ್ಷರಸ್ಥರ ಮಾಧ್ಯಮವಾಗಿ, ಅಭಿವ್ಯಕ್ತಿಯ ವೇದಿಕೆಯಾಗಿ, ವಿಚಾರ ವಿನಿಮಯ ಮಾಡಲು ಸಹಕಾರಿಯಾಗಿತ್ತು. ಪತ್ರ ಬರೆಯುವವನ ಆಸಕ್ತಿ ಕೌಶಲ್ಯ ಅಗಾಧ ಪದಸಂಪತ್ತು ಪತ್ರದ ಜೀವಾಳವಾಗಿರುತ್ತದೆ.
   

No comments:

Post a Comment