Saturday, June 22, 2019

02-05-2018
ಬುಧವಾರ(ಇಂದು)
ಲೇಖನ ಸ್ಪರ್ಧೆ

ವಿಷಯ:
ಹಸುಳೆಯಿಂದ ಹಿಡಿದು ವೃದ್ಧೆಯರ ತನಕ ಮಹಿಳೆಯರ ಮೇಲಿನ
ಅತ್ಯಾಚಾರ  ನಡೆಯುತ್ತಲೇ ಇದೆ.
ಇದನ್ನು ತಡೆಗಟ್ಟುವ ಮಾರ್ಗೋಪಾಯಗಳೇನು?

ಪ್ರಕೃತಿ ಮನುಷ್ಯನಿಗೆ ವಿಶೇಷವಾದ ಬುದ್ಧಿ ಕೌಶಲ್ಯಗಳನ್ನು ಕೊಟ್ಟು ಪ್ರಾಣಿಗಳಿಂದ ಅವನನ್ನು ಭಿನ್ನವಾಗಿಸಿದೆ. ತನ್ನ ಬುದ್ಧಿಶಕ್ತಿಯಿಂದ ವಿವೇಚನೆ ಮಾಡುವ ಸಾಮರ್ಥ್ಯವನ್ನು ಪಡೆದಿದ್ದಾನೆ. ಅದಕ್ಕೆ ಪೂರಕವಾಗಿ ಶಿಕ್ಷಣವು ಅವನನ್ನು ಪ್ರತಿಯೊಂದನ್ನು ಕೂಲಂಕುಶವಾಗಿ ಪರಿಶೀಲಿಸಿ ನಿರ್ಧಾರವನ್ನು ತೆಗೆದುಕೊಳ್ಳಲು ಅವನಿಗೆ ಮಾರ್ಗದರ್ಶನವಿಯುತ್ತದೆ. ದುರಂತವೆಂದರೆ ಇಂದು ಶಿಕ್ಷಣ ಪಡೆದಿರುವ ಸುಶಿಕ್ಷಿತರಿಂದಲೇ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ. ಅವುಗಳಲ್ಲಿ ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ಹಸುಳೆಗಳಿಂದ ಹಿಡಿದು ವೃದ್ದೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳು ನಮ್ಮ ಸಮಾಜದ ನೈತಿಕತೆಯನ್ನೇ ಪ್ರಶ್ನಿಸುವಂತಾಗಿದೆ.

    ನಾವೆಷ್ಟೇ ಮುಂದುವರೆದಿದ್ದರು , ನಾಗರಿಕತೆಯ ಅರಿವಿದ್ದರೂ, ಅನಾಗರಿಕರಂತೆ ಅಮಾಯಕ ಅಬಲೆಯರ ಮೇಲೆ ಅತ್ಯಾಚಾರ ಎಸಗುವಂತಹ ಹೀನಕೃತ್ಯಕ್ಕೆ ಮನುಷ್ಯ ಕೈ ಹಾಕಿರುವುದು ನಿಜಕ್ಕೂ ಹೇಯವೆನಿಸುತ್ತದೆ. ಇದನ್ನು ತಡೆಯಲು ಸಾಧ್ಯವಿಲ್ಲವೇ ಎಂದು ಯೋಚಿಸಿದರೆ ನಿಜಕ್ಕೂ ಇದಕ್ಕೆ ಪರಿಹಾರವಿದೆ.

*  ಹೆಣ್ಣನ್ನು ಕಾಡುವ ಇಂತಹ ಕಾಮುಕರನ್ನು ಕೃತ್ಯ ಎಸಗಿದ್ದು ಗೊತ್ತಾದ ತಕ್ಷಣವೇ ಅವನನ್ನು ಹಿಡಿದು ಗಲ್ಲಿಗೇರಿಸುವ ಮುಖಾಂತರ ಅಂತಹ ಮನಸ್ಥಿತಿಯವರಲ್ಲಿ ಭಯದ ವಾತಾವರಣ ನಿರ್ಮಾಣವಾಗಬೇಕು.

** ಸ್ತ್ರೀ ಇಂದು ಎಲ್ಲಾ ರಂಗಗಳಲ್ಲೂ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾಳೆ. ಆದರೆ ತಮ್ಮ ಕಾರ್ಯಕ್ಷೇತ್ರದಲ್ಲಿ ಅವಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ದನಿ ಎತ್ತುವಲ್ಲಿ ಹಿಂದೇಟು ಹಾಕುತ್ತಿರುವುದು ಇಂತಹ ಕೃತ್ಯಗಳು ನಡೆಯಲು ಕಾರಣವಾಗಿದೆ. ಯಾರೇ ಆಗಲಿ ಅವನ್ನು ಶೋಷಿಸುತ್ತಿರುವುದು ಗೊತ್ತಾದ ಕೂಡಲೇ ಪ್ರತಿಭಟಿಸುವ ಮೂಲಕ ಸಮಾಜದೆದುರು ಅಂಥವರ ಬಣ್ಣ ಬಯಲು ಮಾಡಬೇಕು.

*** ನಮ್ಮದು ಗಾಂಧಿ ಕಂಡ ರಾಮರಾಜ್ಯವಲ್ಲ. ಇಲ್ಲಿ ಕೀಚಕರು ಬಹಳಷ್ಟು ಜನ ಇದ್ದಾರೆ. ಅಂತಹವರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೆಣ್ಣು ಸಬಲಳಾಗಬೇಕು. ಆತ್ಮ ರಕ್ಷಣೆಯ ವಿದ್ಯೆಗಳನ್ನು ಕಲಿತಿರಬೇಕು. ಅಲ್ಲದೆ ಅವಳು ತನ್ನಲ್ಲಿ ರಕ್ಷಣೆಗಾಗಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಬೇಕು.

**** ಮಹಿಳೆಯರು ಮಕ್ಕಳು ಆದಷ್ಟು ಒಬ್ಬಂಟಿಯಾಗಿ ಓಡಾಡುವುದನ್ನು ಕಡಿಮೆ ಮಾಡಬೇಕು. ಅನಿವಾರ್ಯ ಸಂದರ್ಭಗಳಲ್ಲಿ ತನ್ನ ಜೊತೆಗೆ ನಂಬಿಕಸ್ಥ ರನ್ನು ಕರೆದುಕೊಂಡು ಹೋಗಬೇಕು. ಅಥವಾ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ತನ್ನ ಮೇಲೆ ನಡೆಯುವ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಬಹುದು.

***** ನಮ್ಮ ಸಮಾಜ ಚಿಕ್ಕಂದಿನಿಂದಲೇ ನೈತಿಕ ಪಾಠವನ್ನು ಮಾಡಬೇಕು. ಸಂಬಂಧಗಳ ಮಹತ್ವವನ್ನು ತಿಳಿಸಬೇಕು. ನಾಗರಿಕತೆಯ ಲಕ್ಷಣಗಳನ್ನು ಮನವರಿಕೆ ಮಾಡಿಕೊಡಬೇಕು. ಸ್ತ್ರೀ ಕೇವಲ ಭೋಗದ ವಸ್ತುವಲ್ಲ ಅವಳು ಗೌರವಿಸಲ್ಪಡುವಂತಹವಳು ಎಂಬುದನ್ನು ಹಿರಿಕಿರಿಯರಾದಿಯಾಗಿ ಪಾಲಿಸಿಕೊಂಡು ಬರಬೇಕು.

****** ಕಾನೂನು ಅತ್ಯಾಚಾರಿಗಳಿಗೆ ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಬಾರದು. ನಮ್ಮ ವ್ಯವಸ್ಥೆ ಮೊದಲು ಬದಲಾಗಬೇಕು. ಹಣ್ಣು ತಿಂದವನು ಬಿಟ್ಟು ಸಿಪ್ಪೆ ಮುಟ್ಟಿದವನನ್ನು ಪರಿಗಣಿಸುವುದನನ್ನು ಮೊದಲು ಬಿಡಬೇಕು.

******* ಸಮಾಜದ ಆದರ್ಶಪ್ರಾಯ ವ್ಯಕ್ತಿಗಳು ಹಾಳಾಗಿರುವ ಮನಸ್ಥಿತಿಗಳನ್ನು ತಿದ್ದುವ ಕೆಲಸ ಮಾಡಬೇಕು. ಅದಕ್ಕೂ ಮುಂಚೆ ಅವರು ಸರಿ ಇರಬೇಕು.

ಒಟ್ಟಿನಲ್ಲಿ ಅತ್ಯಾಚಾರ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಅತ್ಯಚಾರ ನಡೆದಾಗ ಅಷ್ಟೇ ಜಾಗೃತವಾಗುವ ಸಂಘಟನೆಗಳು, ಮತ್ತೊಂದು ಅತ್ಯಾಚಾರ ನಡೆಯುವವರೆಗೂ ಹೊದ್ದು ಮಲಗಿಬಿಟ್ಟರೆ ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಅದೆಲ್ಲೇ ನಡೆಯಲಿ ಒಕ್ಕೊರಲಿನ ದನಿಯಲ್ಲಿ ಪ್ರತಿಭಟಿಸಬೇಕು. ನ್ಯಾಯ ಸಿಗುವವರೆಗೂ ಹೊರಡಬೇಕು ಆಗ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳ ಬಹುದಾಗಿದೆ.

ಅಮು ಭಾವಜೀವಿ

No comments:

Post a Comment