ಬೇಸಿಗೆ ಶಿಬಿರಗಳು ಇಂದು ಮಕ್ಕಳ ಮೇಲೆ ಪರಿಣಾಮ ಬೀರುವುದಕ್ಕಿಂತ ಹಣ ಮಾಡುವ ದಂಧೆಯಾಗಿ ಹೋಗಿದೆ. ಅದರಲ್ಲೂ ಪೋಷಕರು ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳ ಹೆಸರಿನಲ್ಲಿ ಕೆಲಕಾಲ ಹೊರಗಿಟ್ಟು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗುವ ಪರಿಪಾಠ ಹೆಚ್ಚಾಗುತ್ತಿದೆ. ಎಷ್ಟಾದರೂ ಹಣ ಕೊಟ್ಟು ತಮ್ಮ ಮಕ್ಕಳನ್ನು ಇಂತಹ ಶಿಬಿರಗಳಿಗೆ ಬಿಟ್ಟು ಬರುತ್ತಾರೆ. ಮಕ್ಕಳ ಆಸಕ್ತಿಗಳೇನು? ಅವರ ಅಗತ್ಯಗಳೇನು ಅದನ್ನು ಪೋಷಕರು ಅರ್ಥಮಾಡಿಕೊಳ್ಳದೆ ಕೇವಲ ಪ್ರತಿಷ್ಠೆಗಾಗಿ ತಮ್ಮ ಮಕ್ಕಳನ್ನು ಬೇಸಿಗೆ ಶಿಬಿರಗಳು ಎಂಬ ಸೆರೆಮನೆಗೆ ತಳ್ಳಿ ಬರುತ್ತಾರೆ. ಧಾವಂತದ ಬದುಕಿನಲ್ಲಿ ತಮ್ಮ ಮಕ್ಕಳಿಗೆ ಎಲ್ಲವನ್ನೂ ಕೊಡಿಸಿದ ತೃಪ್ತಿಗಾಗಿ ತಮ್ಮ ದುಡಿಮೆಯ ಒಂದಿಷ್ಟು ಅಂಶವನ್ನು ಇದಕ್ಕಾಗಿ ವ್ಯಯ ಮಾಡುತ್ತಾರೆ. ಆದರೆ ಮಕ್ಕಳಿಗೆ ಅವರ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಕಲಿಯಲೇಬೇಕೆಂಬ ಒತ್ತಡದಲ್ಲಿ ನೂಕಿ ಬರುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗಲಾರದು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಸಜ್ಜೆಯಾಗದಂತೆ ಅವರು ಸ್ವಚ್ಛಂದವಾಗಿ, ತಮ್ಮದೆಯಾದ ಸೃಜನಶೀಲತೆ ಕಲಾವಂತಿಕೆ ನೈಜ ಅನುಭವ ಪಡೆಯುವಂತಹ ಚಟುವಟಿಕೆಗಳನ್ನು ಮನೆಗಳಲ್ಲೇ ನೀಡಿದರೆ ಸಾಕಾಗುತ್ತದೆ. ಅದಕ್ಕಾಗಿ ಪೋಷಕರು ಖರ್ಚು ಮಾಡಬೇಕಾಗಿಲ್ಲ. ಬದಲಾಗಿ ತಮ್ಮ ಸಮಯವನ್ನು ತಮ್ಮದೇ ಮಕ್ಕಳಿಗೆ ನೀಡಿದಾಗ ಆ ಮಕ್ಕಳಿಗೂ ಹೆತ್ತವರ ಪ್ರೀತಿಯ ಸವಿದಂತಾಗುತ್ತದೆ. ಹಿಂದಿನ ಕಾಲದಲ್ಲಿ ಬೇಸಿಗೆ ರಜೆ ಬಂತೆಂದರೆ ಮಕ್ಕಳು ಖುಷಿಯಿಂದ ಅಜ್ಜ-ಅಜ್ಜಿಯ ಮನೆಗೆ ಅತ್ತೆ ಮಾವನ ಮನೆಗೆ ಹೋಗುವುದು ವಾಡಿಕೆಯಾಗಿತ್ತು. ಅಲ್ಲಿ ಅಜ್ಜ-ಅಜ್ಜಿಯರು ತಮ್ಮ ಜೀವನಾನುಭವಗಳನ್ನು, ತಾವು ತಿಳಿದ ಶಾಸ್ತ್ರ ಪುರಾಣಗಳು ,ನೀತಿಕಥೆಗಳು, ಕೋಲಾಟ, ಭಜನೆಗಳು, ಜನಪದ ನೃತ್ಯಗಳು, ಸೋಬಾನೆ ಪದಗಳು, ಗ್ರಾಮೀಣ ಕ್ರೀಡೆಗಳು, ಈಜುವುದು, ಮರಕೋತಿ ಆಟ ಆಡುವುದು, ಬುಗುರಿ ಚಿನ್ನಿದಾಂಡು, ಕಾಲ್ಚೆಂಡು ಮುಂತಾದ ಆಟಗಳನ್ನು ಯಾವುದೇ ನಿರ್ಬಂಧವಿಲ್ಲದೆ ನಿರ್ಭೀತಿಯಿಂದ ಕಲಿಯುವ ಸ್ವಾತಂತ್ರ ಮಕ್ಕಳಿಗೆ ಇತ್ತು. ಅಲ್ಲಿ ಹಿರಿಯರಾದವರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಅಲ್ಲಿ ಹೀಗೆ ಇರಬೇಕು ಎಂಬ ಕಟ್ಟುಪಾಡುಗಳಿರಲಿಲ್ಲ. ಸ್ವಚ್ಛಂದದ ಪರಿಸರದಲ್ಲಿ, ಪ್ರೀತಿ ಆಸರೆಯಲ್ಲಿ ಮಕ್ಕಳ ಬಾಲ್ಯ ಅರಳುತ್ತಿತ್ತು. ಅವರ ಕ್ರಿಯಾಶೀಲತೆಗೆ ವೇದಿಕೆ ದೊರೆತಿತ್ತು. ಪರಸ್ಪರರಲ್ಲಿ ಒಡನಾಟ ಪ್ರೀತಿ ವಿಶ್ವಾಸ ನಂಬಿಕೆ ಕಾಳಜಿ ಸಹಕಾರ ಮನೋಭಾವ ಮಾನವೀಯತೆ ಜೀವನ ಮೌಲ್ಯಗಳು ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತಿದ್ದವು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಭದ್ರ ತಳಪಾಯವನ್ನು ಹಾಕಿ ಕೊಡುತ್ತಿದ್ದವು. ಆದರೆ ಇಂದಿನ ಮಕ್ಕಳಿಗೆ ಅಜ್ಜಿಯ ಮನೆಗಳೇ ಕಾಣೆಯಾಗಿಹೋಗಿವೆ. ಶಾಲೆ ಮನೆಗೆಲಸ ಆಟ ಪಾಠ ಮುಂತಾದ ಶೈಕ್ಷಣಿಕ ಚಟುವಟಿಕೆಗಳಲ್ಲಿಯೇ ಮಕ್ಕಳ ಬಾಲ್ಯ ಕಳೆದುಹೋಗುತ್ತಿದೆ. ಮಗು ಪ್ರತಿ ಹಂತದಲ್ಲೂ ಅಸಹಾಯಕನಾಗಿ ಇನ್ನೊಬ್ಬರ ಸಹಾಯವನ್ನು ಅಪೇಕ್ಷಿಸುವಂತೆ ವಾತಾವರಣವನ್ನು ಹೆಚ್ಚಿಸಿಕೊಂಡಿದ್ದೇವೆ. ಈಗ ಮತ್ತೆ ಮಕ್ಕಳನ್ನು ಬೇಸಿಗೆ ಶಿಬಿರಗಳಲ್ಲಿ ಬಿಟ್ಟು ನಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಿದ್ದೇವೆಯೇ ಹೊರತು ಅದರಿಂದ ಮಕ್ಕಳಿಗೆ ಯಾವುದೇ ಲಾಭವಿಲ್ಲ. ಬೇಸಿಗೆ ಶಿಬಿರಗಳ ಎಂಬುದೆಲ್ಲಾ ದುಡ್ಡು ಮಾಡುವವರು ಹೊಸ ಮಾರ್ಗಗಳಾಗಿವೆ ಅಷ್ಟೇ. ನಮ್ಮದೇ ಮಕ್ಕಳನ್ನು ನಮ್ಮದೇ ದುಡ್ಡು ಕೊಟ್ಟು ಅವರಲ್ಲಿ ಬಿಟ್ಟು ಬರುತ್ತೇವೆಯೇ ಹೊರತು ನಮ್ಮ ಮಕ್ಕಳನ್ನು ನಮ್ಮ ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ಸಂಬಂಧಗಳೊಂದಿಗೆ ಬೆಳೆಯಲು ಬಿಡುವುದೇ ಇಲ್ಲ.
ಒಟ್ಟಿನಲ್ಲಿ ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಜಗತ್ತಿನಲ್ಲಿ ಯಾವುದೇ ಪರಿಣಾಮವನ್ನು ನೀಡಲಾರವು. ಬದಲಾಗಿ ಅವರ ಸ್ವಚ್ಛಂದದ ಬಾಲ್ಯವನ್ನು ಬೇಲಿ ಹಾಕಿ ಬಂಧಿಸಿಡಲು ನಾವು ಈ ಬೇಸಿಗೆ ಶಿಬಿರಗಳ ಮೊರೆಹೋಗುತ್ತೇವೆ ಅಷ್ಟೇ. ಅದರ ಬದಲು ನಾವೇ ನಮ್ಮ ಮಕ್ಕಳನ್ನು ದಿನದ ಗಂಟೆಗಳ ಸಮಯ ನೀಡಿ ಅವರ ವ್ಯಕ್ತಿತ್ವವೃದ್ಧಿಗೆ ಶ್ರಮವಹಿಸೋಣ.
ಧನ್ಯವಾದಗಳು
ಅಮು ಭಾವಜೀವಿ
No comments:
Post a Comment