*ವಿಚಾರಗೋಷ್ಠಿ*
ಹೆಸರು : *ಅಮು ಭಾವಜೀವಿ*
ಚಿಂತನೆ : *ಸಾಮಾಜಿಕ ಜಾಲತಾಣಗಳು: ಯುವಕರಲ್ಲಿ ಪ್ರಭಾವಿತ ಪೂರಕ ಮತ್ತು ಮಾರಕ ಚಿಂತನೆಗಳು.*
ಆಧುನಿಕ ಜಗತ್ತಿನ ಅತ್ಯಂತ ವಿಶಾಲವಾದ, ವಿಸ್ಮಯವಾದ, ಅಗಾಧ ವಿಷಯ ಸಂಪತ್ತನ್ನು ತನ್ನೊಳಗೆ ಅಡಗಿಸಿಕೊಂಡು ಇಡೀ ಜಗತ್ತಿನ ಬಹುತೇಕ ಎಲ್ಲರನ್ನೂ ತಲುಪಿರುವ ಏಕೈಕ ಮಾಧ್ಯಮವೇ ಸಾಮಾಜಿಕ ಜಾಲತಾಣಗಳು. ಇಂದಿನ ಪ್ರತಿಯೊಬ್ಬರ ಅವಶ್ಯಕತೆಗಳು ಪೂರೈಕೆಯಾಗುತ್ತಿರುವುದು ಇದೇ ಮಾಧ್ಯಮದಿಂದ. ಇಂದು ಜಗತ್ತು ಕಿರಿದಾಗಿದೆ. ಬೇಕಾದದ್ದೆಲ್ಲ ಅಂಗೈಯೊಳಗೆ ಸಿಗುತ್ತಿದೆ . ಆಧುನಿಕ ಜಗತ್ತು ಸಾಮಾಜಿಕ ಜಾಲ ತಾಣಗಳ ಸಂಪರ್ಕ ಸೇತುವಿನಿಂದಾಗಿ ಕ್ಷಣಾರ್ಧದಲ್ಲಿ ಮಾಹಿತಿಗಳನ್ನು ರವಾನಿಸುವ ಮತ್ತು ಸಂಗ್ರಹಿಸುವ ಮತ್ತೆ ಅದನ್ನು ಕೋಟ್ಯಾಂತರ ಜನರಿಗೆ ತಲುಪಿಸುವ ಕಾರ್ಯಕ್ಕೆ ತುಂಬ ಯಶಸ್ವಿಯಾಗಿ ಉಪಯೋಗಿಸಿಕೊಳ್ಳುತ್ತದೆ.
ಇಂದು ಜಗತ್ತು ಅತಿವೇಗವಾಗಿ ಬದಲಾವಣೆಯನ್ನು ಮೈಗೂಡಿಸಿಕೊಳ್ಳುತ್ತಿದೆ. ಕ್ಷಣಕ್ಷಣಕ್ಕೂ ಅದರ ಗತಿ ಬದಲಾಗುತ್ತದೆ. ಮನುಷ್ಯರು ಮನುಷ್ಯರನ್ನು ನಂಬುವುದಕ್ಕಿಂತಲೂ ಹೆಚ್ಚಾಗಿ ತಂತ್ರಜ್ಞಾನವನ್ನು ಮೆಚ್ಚಿಕೊಂಡಿದ್ದಾನೆ. ಅದರಲ್ಲೂ ಯುವ ಸಮುದಾಯ ಇಡೀ ದಿನದ ತಮ್ಮ ಅಮೂಲ್ಯ ಸಮಯವನ್ನು ಸಾಮಾಜಿಕ ಜಾಲತಾಣಗಳನ್ನು ತಡಕಾಡುವುದರಲ್ಲಿಯೇ ಕಳೆಯುತ್ತಿರುವುದು ವಿಷಾದನೀಯ ಎನಿಸಿದರೂ ಅದು ಇಂದಿನ ಅನಿವಾರ್ಯತೆ ಕೂಡ ಆಗಿದೆ. ವಿದ್ಯಾವಂತ ಅವಿದ್ಯಾವಂತರೆನ್ನದೆ ಪ್ರತಿಯೊಬ್ಬರಿಗೂ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಅವರ ಆಸಕ್ತಿ , ಪ್ರತಿಭೆಗೆ ಅವಕಾಶವನ್ನು ಒದಗಿಸಿದೆ. ಮಾನವ ಸಂಪನ್ಮೂಲ ಸದ್ಭಳಕೆಯಾಗದೆ ಸಾಮಾಜಿಕ ಜಾಲತಾಣಗಳು ಅವರನ್ನು ಸೋಮಾರಿಗಳನ್ನಾಗಿ ಮಾಡುತ್ತಿದೆ. ಇದರಿಂದ ಮಾನವೀಯ ಸಂಬಂಧಗಳು ಬೆಸೆದುಕೊಳ್ಳದೇ ಕೇವಲ ಯಾಂತ್ರಿಕ ಬದುಕಿನ ಜೀವನ ಪಯಣ ಅವರಲ್ಲಿ ನಿರಾಸಕ್ತಿ, ಅಪರಾಧ ಮನೋಭಾವವನ್ನು ಹೆಚ್ಚಿಸುತ್ತಿದೆ. ಸಹನೆ ,ತಾಳ್ಮೆ ,ಪ್ರೀತಿ ವಿಶ್ವಾಸ ,ನಂಬಿಕೆ, ಸಹೋದರತೆ ಸಹಬಾಳ್ವೆ, ಸಂಸ್ಕಾರ ಮುಂತಾದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಎಡವಿ ಬೀಳುವಂತೆ ಮಾಡುತ್ತದೆ. ಕೇವಲ ಕಣ್ಣಿಗೆ ಕಾಣುವ ಪರದೆಯ ಮೇಲೆ ಎಲ್ಲರ ಬದುಕಿನ ಚಿತ್ರಣಗಳನ್ನು ನೋಡುವುದರಲ್ಲಿಯೇ ಕಳೆದು ಹೋಗುತ್ತಿದ್ದಾರೆ. ಎದುರಿಗಿರುವ ವ್ಯಕ್ತಿಗಳನ್ನು, ಬಾಂಧವ್ಯಗಳನ್ನು ಮರೆತು ಎಲ್ಲೋ ಇರುವ ಕಣ್ಣಿಗೆ ಕಾಣದ ಜನರೊಂದಿಗೆ ಆತ್ಮೀಯವಾಗಿ ಬೆರೆಯುವ ಇವರು, ತಾನೆಲ್ಲಿದ್ದೇನೆ ಎಂಬುದನ್ನೇ ಮರೆಸುವಷ್ಟು ಅಮಲಿನ ಜನರನ್ನು ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿ ಇಟ್ಟು ಕೊಂಡಿದೆ.
ಸಾಮಾಜಿಕ ಜಾಲತಾಣಗಳು ಬಳಸಿಕೊಳ್ಳುವವನ ವಿವೇಚನೆಯ ಮೇಲೆ ಅದರ ಸಾಧಕ ಬಾಧಕಗಳು ನಿರ್ಧಾರವಾಗುತ್ತವೆ. ಒಳಿತುಕೆಡುಕುಗಳ ಸಮ್ಮಿಶ್ರಣವೇ ಈ ಸಾಮಾಜಿಕ ಜಾಲತಾಣಗಳು. ಒಳ್ಳೆಯದಕ್ಕಾಗಿ ಬಳಸಿಕೊಂಡಾಗ ಅದು ಒಳ್ಳೆಯ ಫಲಿತಾಂಶವನ್ನೇ ನೀಡುತ್ತದೆ ಉದಾಹರಣೆಗೆ ಯಾರಿಗೋ ಅಪಘಾತವಾದಾಗ ಅಥವಾ ಆರೋಗ್ಯದಲ್ಲಿ ಏರುಪೇರಾದಾಗ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹಾಯಕವಾಗುತ್ತದೆ. ಇನ್ನು ಕೆಟ್ಟದ್ದಾಗಿ ಬಳಸಿಕೊಂಡರೆ ಸೈಬರ್ ಅಪರಾಧಗಳ ಅಂತಹ ಕುಕೃತ್ಯಗಳು ಸಾಮಾನ್ಯವಾಗಿ ಇಂದು ಯುವಜನತೆಯನ್ನು ಹಾದಿ ತಪ್ಪಿಸಿ, ಅಪರಾಧಿಗಳನ್ನಾಗಿ ಮಾಡುತ್ತಿದೆ. ಅಲ್ಲದೆ ಇವು ವಿಚಾರ ವಿನಿಮಯಕ್ಕೆ ವೇದಿಕೆ ಒದಗಿಸಿ ಪರ ವಿರೋಧದ ಚರ್ಚೆಗೆ ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ . ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೆ ನಿರ್ಬಂಧ ಹೇರಲು ಸಾಧ್ಯವಾಗದೆ ಯುವಜನತೆಗೆ ಅತಿ ಸುಲಭವಾಗಿ ದೊರಕುವ ಮಾಧ್ಯಮ ಆಗಿರುವುದರಿಂದ, ಅದರ ದುಷ್ಪರಿಣಾಮಗಳನ್ನು ಹೆಚ್ಚು ಅನುಭವಿಸುತ್ತಿದ್ದಾರೆ.
ತನ್ನ ಪ್ರತಿಭೆಗೆ ಪೂರಕವಾಗಿ, ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳು ಯುವಕರಿಗೆ ಮಾರ್ಗದರ್ಶನ ದಂತಿದೆ. ತನಗೆ ಬೇಕಾದ ಆಕರಗಳನ್ನು ತುದಿಯಲ್ಲಿಯೇ ಹುಡುಕಿಕೊಳ್ಳುವ ಸದಾವಕಾಶವನ್ನು ಇವು ಒದಗಿಸಿಕೊಟ್ಟಿವೆ. ಅಲ್ಲದೆ ಕಡಿಮೆ ಖರ್ಚಿನ ಅತ್ಯಂತ ಹೆಚ್ಚು ವಿಷಯ ಸಂಗ್ರಹಣೆಗೆ ಇದು ಸಹಕಾರಿಯಾಗಿದೆ. ಅಲ್ಲದೆ ತಾನು ತಿಳಿದುಕೊಂಡಿರುವುದನ್ನು ಅತ್ಯಂತ ವೇಗವಾಗಿ, ಅತಿ ಹೆಚ್ಚು ಜನರಿಗೆ ಮುಟ್ಟಿಸಲು ಹಾಗೂ ಅದರ ಸತ್ಯಾಸತ್ಯತೆಯ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆಯನ್ನು ಪಡೆಯಲು ಇಲ್ಲಿ ಅವಕಾಶವಿದೆ. ಕಲಿಕೆಯ ಆಯಾಮದಲ್ಲಿ ವಿಷಯದ ಅಗಾಧತೆಯನ್ನು ತಮ್ಮ ಮುಂದೆ ತೆರದಿಟ್ಟುಕೊಳ್ಳುವ, ಅದನ್ನು ತಮ್ಮ ಅಭಿಪ್ರಾಯದಂತೆ ಬರೆದಿಟ್ಟುಕೊಳ್ಳುವ, ಬರೆದದ್ದನ್ನು ಇತರರಿಗೆ ಸುಲಭವಾಗಿ ತಲುಪಿಸುವ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.
ಕೇವಲ ಮನರಂಜನೆಗಾಗಿ ಸಾಮಾಜಿಕ ಜಾಲ ತಾಣಗಳನ್ನು ಬಳಸುವವರೂ ಇದ್ದಾರೆ. ಎಲ್ಲಾ ರಂಗಗಳಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿರುವ ಸಾಮಾಜಿಕ ಜಾಲತಾಣಗಳು ಸಾಹಿತ್ಯ, ಸಂಗೀತ ಸೇರಿದಂತೆ ಅದೆಷ್ಟೋ ಪ್ರಕಾರಗಳನ್ನು ಅಪಮೌಲ್ಯಗೊಳ್ಳುತ್ತಿದೆ. ಇದರಿಂದ ಪ್ರಭಾವಿತನಾಗಿ ಯುವಜನರು ಅಡ್ಡದಾರಿ ಹಿಡಿಯುವ ,ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ, ಸೈಬರ್ ಕ್ರೈಂನಂತಹ ಹೊಸ ಅಪರಾಧ ವಿಭಾಗ ಹುಟ್ಟಿಕೊಳ್ಳಲು ಕಾರಣ ವಾಗಿದೆ. ಇನ್ನೊಬ್ಬರ ತೇಜೋವಧೆಗೆ, ಕಿರುಕುಳಕ್ಕೆ, ವಸೂಲಿ ಬಾಜಿಗೆ, ಅತ್ಯಾಚಾರ ಕೊಲೆ ಸುಲಿಗೆ ದರೋಡೆ ಹೀಗೆ ಸಮಾಜದ ಸ್ವಾಸ್ಥ ಕೆಡಿಸುವಂತಹ ಕೃತ್ಯಗಳಿಗೆ ಬಲಿಯಾಗುತ್ತಿರುವುದು ತುಂಬಾ ವಿಷಾದನೀಯ ಸಂಗತಿ.
ಒಟ್ಟಾರೆ ಸಾಮಾಜಿಕ ಜಾಲತಾಣಗಳು ಆಧುನಿಕ ಜಗತ್ತಿನ ಅನಿವಾರ್ಯ ಬದುಕಿನ ಅಗತ್ಯಗಳಾಗಿ ರೂಪುಗೊಂಡಿವೆ. ಅವುಗಳನ್ನು ನಮ್ಮ ಯುವಜನತೆ ಸದ್ಬಳಕೆ ಮಾಡಿಕೊಂಡು ತಮ್ಮ ಬದುಕಿನ ಅಗತ್ಯಗಳನ್ನು ಪೂರೈಸಿಕೊಂಡು ಜೀವನ ಜೀವನ ಸಾರ್ಥಕತೆಗೆ ಪೂರಕಗೊಳಿಸಿಕೊಂಡು ಅದರ ಸತ್ಫಲಗಳನ್ನು ಮಾತ್ರ ಪಡೆದುಕೊಂಡರೆ ಸಮಾಜದ ಸ್ವಾಸ್ಥ್ಯದೊಂದಿಗೆ ತಮ್ಮ ಏಳಿಗೆಯನ್ನು ಕಂಡು ಕೊಳ್ಳಬಹುದು. ಈ ಬಗ್ಗೆ ಚಿಂತಿಸಿ ಯುವ ಸಮುದಾಯ ಸಾಗಲಿ ಎಂದು ಆಶಿಸುತ್ತೇನೆ.
*ಅಮುಭಾವಜೀವಿ*
0253ಪಿಎಂ22042018
ಪೃಥ್ವಿ ಸೂರಿ ಅವರ ಪ್ರತಿಕ್ರಿಯೆ
ಚಿಂತನೆ ೨.
ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿನ ಮಿತಿ, ಪರಿಮಿತಿ ಹಾಗೂ ಪರಿಣಾಮ ಸೈಬರ್ ಕ್ರೈಮ್ ಗಳಿಗೆ ಗುರಿಯಾಗುತ್ತಿರು ಹದಿ ಹರೆಯದ ಯುವಜನರು
ಚಿಂತನಾರ್ಹವಾಗಿ ಪ್ರಸ್ತಾಪಿಸಿದ್ದಿರಿ.
No comments:
Post a Comment