Friday, June 21, 2019

*ಬೆಳಕಿನ ಪಾಠ*

ಈ ಸಂಜೆಗೂ ಮುಂಜಾವಿಗೂ
ಭರವಸೆಯೇ ಆ ಬೆಳಕು
ನಟ್ಟಿರುಳಿನ ಕಪ್ಪು ಕತ್ತಲೆಗೂ
ಭಯವ ಬೇಧಿಸುವ ಆ ಸೆಳಕು

ಹಗಲಿನ ಆ ಕೋಟಿ ಜೀವಕೆ
ಆಪ್ಯಾಯಮಾನ ಆ ಬೆಳಕು
ನಿಶಾಚರಿಗಳ ನಿದ್ರೆಯ ದೂರ ತಳ್ಳಿ
ಹಸಿವು ನೀಗಿಸುವ ಮಂದ ಬೆಳಕು

ಉಷೆಯ ಕಿರಣಗಳ ದಾಳಿಗೆ
ಇಡೀ ಜಗವೇ ಬೆರಗುಗೊಳ್ಳುವುದು
ನಿಶೆಯ ಆ ಪ್ರತಿ ದಾಳಿಗೆ
ಈ ಜಗವೇ ತಣ್ಣಗೆ ಮಲಗುವುದು

ಏನು ಸೋಜಿಗವೂ ಬೆಳಕಿನಾಟ
ಬಿಳಿಯೊಳಗೆ ಏಳು ಬಣ್ಣಗಳ ಕೂಟ
ಬಾಲ್ಯ ಹರೆಯ ಮುಪ್ಪಿನಲ್ಲೂ
ಕುಂದದ ಭರವಸೆಯ ಬೆಳಕಿನ ಓಟ

ನಿಸರ್ಗದ ಈ ನಿತ್ಯ ದೊಂಬರಾಟ
ನೋಡುವ ಪ್ರತಿ ಮನಕೂ ಸೌಂದರ್ಯದ ರಸದೂಟ
ಬೆಳಕಿನ ಪ್ರತಿ ಚಲನೆಯು ಒಂದು ಪಾಠ
ಅದುವೇ ಸತ್ಯವನೆಲ್ಲ ಹೊರಗೆಡಹುವ ಬಂಟ

*ಅಮು ಭಾವಜೀವಿ*

No comments:

Post a Comment