*ಜಗಕೆ ಬೆಳಕಾದ*
ಶಾಂತ ಪ್ರಶಾಂತ ವದನದಿಂದ
ಸದಾ ಮಂದಸ್ಮಿತ ನಗುವಿಂದ
ಆಸೆಯೇ ದುಃಖಕ್ಕೆ ಮೂಲವೆಂದು
ಸಾರಿದವ ತನ್ನವರಿಗೆ ದುಃಖ ನೀಡಿದ
ರಾಜನಾಗಿ ಮೆರೆಯಬಹುದಾದವನು
ಎಲ್ಲಾ ತೊರೆದು ವಿರಾಗಿಯಾದ
ಸಂಸಾರಿಯಾದರೂ ಮನೆ ಮಡದಿ
ಪುತ್ರ ವ್ಯಾಮೋಹ ಬಿಟ್ಟು ಸನ್ಯಾಸಿಯಾದ
ಜಗದ ನೋವನು ಅರಿತವನು
ತನ್ನವರ ನೋವನು ಕಡಲಾಗಿಸಿದ
ಬುದ್ದನಾಗುವ ಆಸೆಯಿಂದಲೇ
ಸಿದ್ದಾರ್ಥ ಸಮೃದ್ಧ ಬದುಕ ತ್ಯಜಿಸಿದ
ಭವ್ಯ ಅರಮನೆಯ ಕಣ್ಗಾವಲಿಂದ
ತಪ್ಪಿಸಿಕೊಂಡು ಭೋದಿವೃಕ್ಷದಡಿಯಲ್ಲಿ
ಧ್ಯಾನಸ್ಥ ಸ್ಥಿತಿಯಲ್ಲಿ ಕೂತು ದಿವ್ಯದೃಷ್ಟಿಯಿಂದ
ಜಗದ ಜಂಜಡಗಳಿಗೆ ಪರಿಹಾರ ಕಂಡುಕೊಂಡ
ಊರಿಗೆ ಉಪಕಾರಿಯಾಗುವ
ಸಲುವಾಗಿ ಮನೆಗೆ ಮಾರಿಯಾದ
ಯಶೋಧರೆಯ ಹತಾಶ ಬದುಕಿಗೆ
ಧ್ಯಾನ ಮೌನದ ಉತ್ತರವಾದ ಬುದ್ದ
ಮನೆ ಗೆಲ್ಲಲಾಗದೇ ಅವನು
ಮನ ಮಾರು ಗೆದ್ದು ಬುದ್ದನಾದ
ಸಂಸಾರದ ಹೊಣೆ ಹೊರಲಾದವ
ಪ್ರಬುದ್ಧ ಧರ್ಮ ನೀಡಿ ಜಗಕೆ ಬೆಳಕಾದ
0339ಎಎಂ18062019
ಅಮು ಭಾವಜೀವಿ
No comments:
Post a Comment