Friday, June 21, 2019


*ನಿನ್ನ ಆತಂಕವನರಿಯದೆ*

ನೀ ನೊಂದು ಕೊಂಡಿರುವೆ ಎಂದು
ನಾನಂದು ಕೊಳ್ಳಲೇ ಇಲ್ಲ
ನಿನ್ನ ಮೊಗದೊಳಗೆ ಅದರ ಯಾವ
ಸೂಚನೆಯು ಗೋಚರಿಸಲೇ ಇಲ್ಲ

ನಿನ್ನ ಒಡಲಾಳದಲ್ಲಿ ಕುದಿವ ಬೆಂಕಿ
ಹೊರಗೆ ಜ್ಯೋತಿಯಾಗಿ ಬೆಳಗುತ್ತಿತ್ತು
ಆ ಬೆಳಕಲ್ಲಿ ಮೈ ಮರೆತ ನನಗೆ
ದೀಪದಡಿಯ ಕತ್ತಲೆ ಕಾಣದಾಗಿತ್ತು

ನೀನೊಂದು ಅಂದದ ಹೂವು ಎಂದಿದ್ದೆ
ಮುಳ್ಳ ಮೇಲೆ ನಿಂತ ನಿನ್ನ ಆತಂಕವನರಿಯದೆ
ಬಯಕೆ ಎಂಬ ತುಸು ಗಾಳಿ ಸೋಕಿದರೂ
ನಿನ್ನ ಇಡೀ ಬದುಕು ಹರಿದು ಹೋಗುವ ಭಯವಿದೆ

ನೀರೊಳಗೆ ನೀನು ಈಜುವ ಪರಿ ಕಂಡು
ನನ್ನೊಳು ನಾನೇ ಸಂತಸ ತಗೊಂಡಿದ್ದೆ
ನೀರೊಳಗಿದ್ದು ನೀ ಅಳುವುದ
ಅರಿಯದ ಮೂರ್ಖ ನಾನಾಗಿ ಹೋದೆ

ನೀನೊಂದು ಹೆಣ್ಣು ಅಂದ ಮಾತ್ರಕ್ಕೆ
ನಿನ್ನ ಒಡಲ ಸೌಂದರ್ಯವನಷ್ಟೇ ಬಯಸಿದೆ
ನಿನ್ನ ಎದೆಯಾಳದ ಹುಣ್ಣು ಕಣ್ಣಿಗೆ
ಗೋಚರಿಸದೆ ನಿನ್ನ ಹಂಗಿಸಿ ನೋವ ಕೊಟ್ಟೆ

ಕ್ಷಮಿಸಿ ಬಿಡು ನನ್ನನ್ನು
ಅರಿತಿರುವೆ ನನ್ನ ತಪ್ಪನ್ನು
ಒಳಗೆ ಕುದಿವ ಲಾವಾರಸ ವಿದ್ದರೂ
ನೀ ಪ್ರಕೃತಿ ಚೆಲುವ ತೊಟ್ಟ ಭೂರಮೆ

ಅಮು ಭಾವಜೀವಿ 0305 ಎಎಂ 20 1 2015

No comments:

Post a Comment