*ಜಾತ್ರೆ*
ಪಡುವಣದ ದಿಗಂತಕೆ
ಹೊಂಬಣ್ಣ ಬಳಿದಾಯಿತು
ಗೋಧೂಳಿ ತಾ ಬೆರೆತು
ಹೊಸ ರಂಗು ತಂದಾಯಿತು
ಮೋಡಗಳ ಮರೆಯಲ್ಲಿ
ರವಿ ಹೊನ್ನ ಗೆರೆ ಎಳೆದಿಹನು
ಮುಸ್ಸಂಜೆ ಮೈಮರೆತು
ಕ್ಷಣ ಹೊತ್ತು ಸಂಭ್ರಮಿಸಿತು
ಮೂಡಣದ ಕಡೆಯಿಂದ
ಮೆಲ್ಲ ಇರುಳು ಜಾರಿ ಬರಲು
ನಗುನಗುತ್ತಾ ರವಿಯು ತಾನು
ಸೇರಿದ ಭೂತಾಯ ಮಡಿಲು
ಸಂಜೆಗಿಂತಲು ಸುಂದರವೀಗ
ಬಾನ ತುಂಬ ನಕ್ಷತ್ರ ಜಾತ್ರೆ
ಹುಣ್ಣಿಮೆಯ ಸರದಾರನದು
ಬೆಳದಿಂಗಳ ಯಾತ್ರೆ
ತಂಗಾಳಿಯ ಸಾಂಗತ್ಯದಲ್ಲಿ
ಉಕ್ಕಿ ಬರುವ ಕಡಲ ಅಲೆಗಳ
ಅಬ್ಬರದ ಉಯ್ಯಾಲೆಯಲ್ಲಿ
ಮುಂಜಾನೆವರೆಗೂ ರವಿ ವಿಶ್ರಮಿಸಿದ.
0714ಪಿಎಂ03052018
*ಅಮು ಭಾವಜೀವಿ*
No comments:
Post a Comment