Saturday, June 22, 2019

ಸವಿನೆನಪುಗಳು ಬೇಕು ಸವೆಯಲು ಈ ಬದುಕು ಎನ್ನುವ ಮಾತಿನಂತೆ ಸವಿ ಕ್ಷಣಗಳನ್ನು, ಮಾಯದ ಗಾಯ ಮಾಡಿದ ಕ್ಷಣಗಳನ್ನು ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಸವಿ ಕ್ಷಣಗಳನ್ನು ಮೆಲುಕು ಹಾಕುವ ಅದೆಷ್ಟು ಹಾಡುಗಳು ನಮ್ಮ ಬದುಕನ್ನು ಸಮಸ್ಥಿತಿಗೆ ತರುತ್ತವೆ. ನಮ್ಮ ಖುಷಿ ಹಾಗೂ ನೋವಿನ ಸಂದರ್ಭದಲ್ಲಿ ಇನ್ನಿಲ್ಲದಂತೆ ಕಾಡುವ ಹಾಡುಗಳು ನಮ್ಮ ಬದುಕಿನ ಭಾರವನ್ನು ಕಡಿಮೆ ಮಾಡುತ್ತವೆ. ಅಂತಹ ಹಾಡುಗಳಲ್ಲಿ ನನ್ನ ಮನಸ್ಸಿಗೆ ಮುಟ್ಟಿದ ಹಾಡುಗಳು ಕೆಲವು ಇವೆ.

     ಮೊದಲನೆಯದಾಗಿ ಬಂಗಾರದ ಮನುಷ್ಯ ಚಿತ್ರದ *ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ* ಈ ಗೀತೆ ನನಗೆ ತುಂಬಾ ಅಚ್ಚುಮೆಚ್ಚು. ಬದುಕಿನ ಏಳುಬೀಳುಗಳಲ್ಲಿ ಸೋಲನ್ನು ಕಾಣುವ ಕ್ಷಣದಲ್ಲಿ ಒಮ್ಮೆ ಈ ಹಾಡನ್ನು ನೆನಪಿಸಿಕೊಂಡರೆ ಮತ್ತೆ ಗೆಲ್ಲುವ ಆತ್ಮವಿಶ್ವಾಸ ಮೂಡುತ್ತದೆ. ಭರವಸೆ ಮೂಡಿಸುವ ಇಂತಹ ಗೀತೆ ನಮ್ಮ ಬದುಕಿನ ಸೋಲನ್ನು ಗೆಲುವಾಗಿ ಸಿಕೊಳ್ಳಲು ಎಂತಹ ಕಷ್ಟ ಬಂದರೂ ಅದನ್ನು ಎದುರಿಸಿ ನಿಲ್ಲುವ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಈ ಹಾಡಿನ ಸ್ಪೂರ್ತಿಯಿಂದ ನನ್ನ ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ಎದೆಗುಂದದೆ ತಾಳ್ಮೆಯಿಂದ ಎದುರಿಸಿ ಗೆದ್ದ ಉದಾಹರಣೆಗಳಿವೆ. ಎಲ್ಲದಕ್ಕೂ ಕಾಲದ ಉತ್ತರವಿದೆ ಆದರೆ ಅಲ್ಲಿಯವರೆಗೂ ಕಟ್ಟಿಕೊಳ್ಳದೇ ನಮ್ಮ ಪ್ರಯತ್ನ ಮಾಡುತ್ತ ಇದ್ದರೆ ಬದುಕು  ಉತ್ತರ ಕೊಡುತ್ತದೆ.

  ಎರಡನೆಯದಾಗಿ ನನಗಿಷ್ಟವಾದ ಹಾಡು ನಂಜುಂಡಿ ಕಲ್ಯಾಣ ಚಿತ್ರದ ಡಾಕ್ಟರ್ ರಾಜಕುಮಾರ್ ಹಾಡಿರುವ *ಬದುಕೇ ಹಸಿರು ಪ್ರೀತಿ ಬೆರೆತಾಗ, ಬದುಕೇ ಕೆಸರಂತೆ ವಿರಸ ಬೆರೆತಾಗ* ಈ ಹಾಡು ನಮ್ಮ ಬಾಂಧವ್ಯಗಳನ್ನು ಹೇಗೆ ಕಾಪಾಡಿಕೊಳ್ಳಬೇಕು, ಪರಸ್ಪರ ಸಂಬಂಧಗಳಲ್ಲಿ ಪ್ರೀತಿಯ ಕೊರತೆಯಿಂದ ಆಗುವ ಅನಾನುಕೂಲಗಳನ್ನು ತುಂಬಾ ಚೆನ್ನಾಗಿ ಉದಯ ಶಂಕರರು ಬರೆದಿದ್ದಾರೆ. ನಾನು ಸದಾ ಗುನುಗುವ ಗೀತೆಗಳಲ್ಲಿ ಇದು ಒಂದು. ನಮ್ಮ ಬದುಕಿನಲ್ಲಿ ಪ್ರತಿ ಮಜಲುಗಳಲ್ಲಿ ಅನೇಕ ಸಂಬಂಧಗಳು ಬಂದು ಹೋಗುತ್ತವೆ. ಆ ಸಂಬಂಧಗಳಲ್ಲಿ ಪ್ರೀತಿ , ಸ್ನೇಹ, ವಿಶ್ವಾಸ , ನಂಬಿಕೆಗಳನ್ನು ಉಳಿಸಿಕೊಂಡಾಗ ಬದುಕು ಸುಂದರವಾಗುತ್ತದೆ. ನನ್ನ ಜೀವನದಲ್ಲಿ ಬಂದ ಆದೆಷ್ಟೋ ಸಂಬಂಧಗಳನ್ನು ಅದೇ ಪ್ರೀತಿ ನಂಬಿಕೆ ವಿಶ್ವಾಸಗಳಿಂದ ಉಳಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಿರುವೆ. ನನ್ನ ಜೀವನದಲ್ಲಿ ನನ್ನನ್ನು ದ್ವೇಷಿಸುವವರನ್ನು ಪ್ರೀತಿಸುವ ಮನಸ್ಥಿತಿಯನ್ನು ಕಾಪಾಡಿಕೊಂಡು ಬರಲು ಈ ಹಾಡು ನನ್ನನ್ನು ಪದೇ ಪದೇ ನೆನಪಿಸುತ್ತಿರುತ್ತದೆ.

ಮೂರನೇ ಗೀತೆ ಓ ಮಲ್ಲಿಗೆ ಚಿತ್ರದ *ಮಲಗು ಮಲಗು ಚಾರುಲತೆ* ನನಗೆ ಅತ್ಯಂತ ಇಷ್ಟವಾದ ಅರ್ಥಪೂರ್ಣ ಕವಿತೆ.

ಎತ್ತಣ ಭೂಮಿಯ ಬಂಗಾರ
ಎತ್ತಣ ಮುತ್ತದು ಕಡಲೂರ
ಸೇರಿಸಿ ಪೋಣಿಸೋ ಮಣಿ ಹಾರ
ಸೃಷ್ಟಿಯ ಸುಂದರ ಸಂಸಾರ
ನೀನೆಲ್ಲೋ ನಾನೆಲ್ಲೋ ಇದ್ದವರು
ಈಗೊಂದು ಗೂಡಲಿ ಸೇರಿದೆವು

ಈ ಸಾಲುಗಳಲ್ಲಿ ಆದೆಂತ ಅಗಾಧ ಅರ್ಥ ಇದೆ. ಭೂಮಿಯ ಆಳದಲ್ಲಿರುವ ಬಂಗಾರ ಮತ್ತು ಕಳೆದ ಸಾಗರದಾಳದಲ್ಲಿ ಇರುವ ಮುತ್ತು ಎರಡು ಸೇರಿದಾಗ ಒಂದು ಸುಂದರ  ಆಗುವಂತೆ ನನ್ನ ಜೀವನವನ್ನು ಒಮ್ಮೆ ತಿರುಗಿ ನೋಡಿದಾಗ ನನ್ನ ಬದುಕಿನಲ್ಲಿ ಬಂದ ಎಷ್ಟೋ ಜನ ಯಾರ್ಯಾರೋ ಎಲ್ಲೆಲ್ಲೋ ಇದ್ದವರು ಇಂದು ನಾವೆಲ್ಲಾ ಸ್ನೇಹಿತರಾಗಿ ಇರುವುದು , ಮುಖ ನೋಡದಿದ್ದರು ಒಬ್ಬರಿಗೊಬ್ಬರು ಆತ್ಮೀಯರಾಗಿ ವ್ಯವಹರಿಸುತ್ತಿರುವುದು ನಾವು ಎಲ್ಲೇ ಇದ್ದರೂ ಹೇಗೆ ಇದ್ದರೂ ಒಂದೇ ಮನೋಭಾವವನ್ನು ಹೊಂದಿರುವುದು ಬದುಕಿನ ಚೆಲುವನ್ನು ಹೆಚ್ಚಿಸುತ್ತದೆ. ಮುಂದುವರೆದಂತೆ

ಬಾಳ ಪಯಣದ ಹಾದಿ
ಅಲ್ಲಲ್ಲಿ ನೂರಾರು ನಿಲ್ದಾಣ
ನೆನಪನ್ನು ಬಿಟ್ಟು ಹೋಗೋ ಪಯಣಿಗರ ಜೊತೆಯಲ್ಲಿ ಏನೆಲ್ಲ ಸಂಧಾನ

ಎಂಥಹ ಅರ್ಥಪೂರ್ಣ ಸಾಲುಗಳಿವು. ಬದುಕಿನ ದಾರಿಯನ್ನು ಸವೆಸುವಾಗ ಈ ಪಯಣಕ್ಕೆ  ಜೊತೆಯಾದವರು ಅದೆಷ್ಟೋ ಜನ ಹೀಗೆ ಬಂದು ಹಾಗೆ ಹೋಗುತ್ತಾರೆ ಮತ್ತೆ ಕೆಲವರು ನಮ್ಮ ಮನಸ್ಸಿನಾಳದಲ್ಲಿ ಉಳಿದಿರುತ್ತಾರೆ. ಅವರುಗಳ ಆ ನೆನಪುಗಳೇ ನಮ್ಮ ಬದುಕಿನ ಆತ್ಮ ಸ್ಥೈರ್ಯವನ್ನು ಹೆಚ್ಚಿಸುವ ಎನರ್ಜಿ ಬೂಸ್ಟರ್. ಜೊತೆಯಲ್ಲಿ ಬಂದವರು ನಿಲ್ದಾಣ ಬಂತೆಂದು ಇಳಿದುಹೋಗುತ್ತಾರೆ ಮತ್ತೆ ಹೊಸಬರು ಹತ್ತಿ ಕೋರುತ್ತಾರೆ. ಅವರೆಲ್ಲರೊಂದಿಗೆ ನಮ್ಮ ಬಾಂಧವ್ಯ ಬೆಳೆಸಿಕೊಂಡು ಬದುಕಿನ ಅಸಹಾಯಕತೆಯನ್ನು ಸ್ನೇಹದ ಸಹಾಯ ಹಸ್ತ ಚಾಚಿದಾಗ ಮುಳುಗುವವನಿಗೆ ಹುಲುಕಡ್ಡಿ ಆಸರೆ ಎಂಬಂತೆ ಸ್ನೇಹ-ಬಾಂಧವ್ಯಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿರುತ್ತದೆ.

ಒಟ್ಟಿನಲ್ಲಿ ಇಂತಹ ಅನೇಕ ಹಾಡುಗಳು ನನ್ನ ಬದುಕಿನಲ್ಲಿ ನನ್ನನ್ನು ಸೋಲನ್ನು ಒಪ್ಪಿಕೊಳ್ಳದೆ ಸದಾ ಭರವಸೆಯ ಆತ್ಮವಿಶ್ವಾಸವನ್ನು ಮೂಡಿಸುತ್ತಾ ಬದುಕಿನ ಸವಿ ಕ್ಷಣಗಳನ್ನು ಆಸ್ವಾದಿಸುತ್ತಾ ನೆಮ್ಮದಿಯಿಂದ ಬದುಕಲು ಪ್ರೇರಣೆಯಾಗಿವೆ. ಅದೆಷ್ಟೋ ಸಂದರ್ಭಗಳಲ್ಲಿ ಬದುಕಿನ ದಾರಿಯನ್ನು ಬದಲಿಸಿ ಸರಿದಾರಿಗೆ ತಂದು ಗುರಿ ಮುಟ್ಟಿಸುವ ಮಹತ್ತರವಾದ ಕೆಲಸವನ್ನು ಎಷ್ಟು ಹಾಡುಗಳು ನನ್ನ ಬದುಕನ್ನು ರೂಪಿಸಿವೆ. ಇಂದು ಇಡೀ ಬದುಕಿನ ಆ ಎಲ್ಲಾ ಸವಿ ಕ್ಷಣಗಳನ್ನು ಮೆಲಕು ಹಾಕಲು ಅನುವು ಮಾಡಿಕೊಟ್ಟ ನಮ್ಮೆಲ್ಲ ಪ್ರೀತಿಯ ಗಣೇಶ್ ಸರ್ ಅವರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ

ಧನ್ಯವಾದಗಳು

*ಅಮು ಭಾವಜೀವಿ*
   

No comments:

Post a Comment