*ಜೀವದಾತ*
ಮಾಗಿ ಚಳಿಯ ಕೊರೆತವನ್ನು
ಕ್ಷಣದಲ್ಲೇ ಓಡಿಸ ಬಂದ
ಬಾನಿನೊಡೆಯ ನೇಸರ
ಇರುಳ ಪರದೆ ಸರಿಸಿ
ಉಷಾಕಿರಣ ಪ್ರಜ್ವಲಿಸಿ
ಜಗವ ಬೆಳಗಿದ ಭಾಸ್ಕರ
ಬಿರಿದ ಮೊಗ್ಗನರಳಿಸಿ
ಇಬ್ಬನಿಯನು ಕರಗಿಸಿ
ಬಿಸಿಲ ಚುರುಕು ಮುಟ್ಟಿಸಿದ
ಹಕ್ಕಿಗಳ ಗಾನವನಾಲಿಸಿ
ಅಲೆಗಳೊಡನೆ ನರ್ತಿಸಿ
ಬೆಳಕಿನ ಉಡುಗೊರೆ ತಂದ
ರವಿ ಬಂದನೆಂದರೆ ಸಾಕು
ಜಗಕೆ ಬೆಳಕಿನ ಪೋಷಾಕು
ತೊಡಿಸಿ ಕತ್ತಲಿಗೆ ಮುಕ್ತಿಯಿತ್ತ
ನಿತ್ಯ ಕಾಯಕ ಯೋಗಿ
ಅವನೆಂದೂ ಆಗನು ಭೋಗಿ
ದಿನಕರನಿವನು ಜೀವ ದಾತ
ಸಸ್ಯಶಾಮಲೆಯ ತಲೆ ನೇವರಿಸಿ
ಬೆಟ್ಟ ಗುಡ್ಡಗಳ ಮೈ ಸ್ಪರ್ಶಿಸಿ
ಬೆಳಗಾಯಿತು ಏಳಿರೆಂದ
ಎಲ್ಲ ಕ್ರಿಯೆಗೆ ಚಾಲನೆ ಕೊಟ್ಟು
ತಾನು ಮಾತ್ರ ಮೌನ ತೊಟ್ಟು
ತನ್ನ ಕಾರ್ಯವ ಪ್ರಾರಂಭಿಸಿದ
7.26 ಎಎಂ 16012019
*ಅಮು ಭಾವಜೀವಿ*
No comments:
Post a Comment