Friday, June 21, 2019

*ಮುಂಜಾನೆಯ ಹಬ್ಬಕ್ಕೆ*

ಮೂಡಣದ ಮನೆಯಲ್ಲಿ
ಬೆಳಕಿನ ಚಿತ್ತಾರ
ಪ್ರಕೃತಿಯ ಮಡಿಲಲ್ಲಿ
ಸುಮ ರಾಶಿಯ ಶೃಂಗಾರ

ಈ ಆನಂದದ ಕ್ಷಣಕ್ಕೆ
ಹಕ್ಕಿಗಳ ಸುಮಧುರ ಗಾನ
ತಂಗಾಳಿಗೆ ತಲೆದೂಗುವ
ಎಳೆ ಪೈರಿನ ನರ್ತನ

ಇಬ್ಬನಿಯ ಹನಿಹನಿಯಲ್ಲೂ
ರವಿಯ ಮರುಸೃಷ್ಟಿಯ ಚಮತ್ಕಾರ
ನಿಸರ್ಗದ ಆ ಸಂಭ್ರಮಕ್ಕೆ
ಹೊನ್ನ ಕಿರಣಗಳ ಚಿತ್ತಾರ

ಮುಂಜಾನೆಯ ದಿನದ ಹಬ್ಬಕ್ಕೆ
ಗಿಡಮರಗಳ ಹಸಿರು ತೋರಣ
ಕವಿದ ಕತ್ತಲೆಯ ನಿರ್ಗಮನಕ್ಕೆ
ದಿನಮಣಿಯ ಬೆಳಕೇ ಕಾರಣ

ಮಳೆ ಬಂದ ಮರುದಿನದ
ಮುಂಜಾನೆ ನೋಡಲು ಬಲು ಚೆಂದ
ನಿಸರ್ಗದ ಈ ವಿಸ್ಮಯವ
ಕವಿ ಭಾವದಲ್ಲಿ ಸವಿಯುವುದೇ ಆನಂದ

0638ಎಎಂ19052018

*ಅಮು ಭಾವಜೀವಿ*

   

No comments:

Post a Comment