ಕಣ್ಣುಗಳು ಮಂಜಾಗುತ್ತಿವೆ. ಎದೆಯ ನೋವು ಹಿಮ್ಮಡಿಸುತ್ತಿದೆ. ಆಡುವವರ ಮಾತುಗಳು ಮತ್ತೆ ಮತ್ತೆ ಹೃದಯವನ್ನು ಚುಚ್ಚುತ್ತಿವೆ. ಮನಸ್ಸು ಇಂಥ ಅದೆಷ್ಟೋ ಸಂದರ್ಭಗಳನ್ನು ಎದುರಿಸಿ ಸೋತು ಹೋಗಿದೆ. ಇದು ನನ್ನ ತಪ್ಪೇ ? ಇರಲಿ ನಾನು ಮಾಡಿದ ಅಪರಾಧವಾದರೂ ಏನು ಇದೆ ?! ನನಗೂ ಆಸೆಯಿದೆ, ಆದರೆ ಏಕೋ ನನಗೆ ಅದು ದಕ್ಕುತ್ತಿಲ್ಲ.
ಬಾಲ್ಯದಲ್ಲಿ ನಾನು ಬಹಳ ಕನಸುಗಳನ್ನು ಕಟ್ಟಿಕೊಂಡು ಬೆಳೆದೆ. ಯೌವನದಲ್ಲಿ ನೂರಾರು ಭರವಸೆಗಳನ್ನು ಇಟ್ಟುಕೊಂಡು ನನ್ನದೇ ಬದುಕನ್ನು ರೂಪಿಸಿಕೊಳ್ಳುವ ಅದಮ್ಯ ಉತ್ಸಾಹದಲ್ಲಿದ್ದ ನನಗೆ ಅವನು ಹೇಗೆ ಅವೆಲ್ಲದರ ಮರೆಯಿಂದ ನುಸುಳಿ ಬಂದು ಪ್ರೀತಿಯ ಬೀಜ ಬಿತ್ತಿದನೋ ಗೊತ್ತಿಲ್ಲ. ದಿನೇ ದಿನೇ ಆ ಬೀಜ ಮೊಳೆತು ಸಸಿಯಾಗಿ ಎಲ್ಲ ಕನಸುಗಳಿಗಿಂತ ನನ್ನ ಮನಸ್ಸಿನಲ್ಲಿ ಅದರ ನೇರಳೆ ಆವರಿಸಿಕೊಂಡಿತ್ತು. ಅವನು ಸ್ಪುರದ್ರೂಪಿ ಯುವಕ. ತುಂಬಾ ಬುದ್ಧಿವಂತ, ಓದಿನಲ್ಲಿ ಸದಾ ಮುಂದು. ಒಂದು ದಿನ ಕಾಲೇಜಿನಲ್ಲಿ ಒಬ್ಬಳೇ ಕೂತು ಓದುತ್ತಿರುವಾಗ ಆಕಸ್ಮಿಕವಾಗಿ ಅವನ ಪರಿಚಯವಾಯಿತು. ಆ ಕ್ಷಣದಿಂದ ಅವನನ್ನು ಮತ್ತೆ ಮತ್ತೆ ನೋಡುವ ಮನಸ್ಸಾಗುತ್ತಿತ್ತು. ಅವನು ನನ್ನನ್ನು ದಿನೇ ದಿನೇ ಸಂಪೂರ್ಣವಾಗಿ ಆಗಮಿಸಿ ಕೊಂಡು ಬಿಟ್ಟಿದ್ದ.
ಮೂರು ವರ್ಷದ ಡಿಗ್ರಿಯ ವ್ಯಾಸಂಗ ಮುಗಿಯುವ ವೇಳೆಗೆ ನಮ್ಮ ಪ್ರೀತಿಯು ಅಂತಿಮ ಹಂತಕ್ಕೆ ಬಂದು ತಲುಪಿತ್ತು. ಆದರೆ ನಾನು ಹೇಳಲಿ ಅಂತ ಅವನು, ಅವನು ಹೇಳಲಿ ಅಂತ ನಾನು ಕಾಲ ಸವೆ ಸಿದ್ದೆವು. ಅಂದು ಕಾಲೇಜಿನ ಅಂತಿಮ ದಿನ. ಎಲ್ಲ ಗೆಳೆಯರು ಬಿಟ್ಟು ಹೋಗುವ ಆತಂಕದಲ್ಲಿ ಒಬ್ಬರನ್ನೊಬ್ಬರು ಆಲಂಗಿಸಿ ಕಂಬನಿ ಮಿಡಿಯುತ್ತಿದ್ದರು. ಆದರೆ ನನ್ನ ಹುಡುಗ ಮಾತ್ರ ತೀರ ಮಂಕಾಗಿ ಕಾಲೇಜಿನ ಕಾರಿಡಾರಿನ ಮೂಲೆಯಲ್ಲಿ ಕಳೆದುಕೊಂಡವರಂತೆ ನಿಂತಿದ್ದ. ಏಕೋ ಹೀಗಿದ್ದೀಯಾ ? ಏನಾಯ್ತು ? ಎಂದು ಅವನ ಬಳಿ ಹೋಗಿ ಕೇಳುತ್ತಿದ್ದಂತೆಯೇ ಅವನನ್ನೇ ಅವನು ಮರೆತವನಂತೆ ನಾನು ಹತ್ತಿರ ಹೋಗಿದ್ದೆ ತಡ ನನ್ನನ್ನು ಬಿಗಿಯಾಗಿ ಅಪ್ಪಿಕೊಂಡು ಅಳಲು ಶುರು ಮಾಡಿದನು. ಒಬ್ಬ ಗಂಡಸಿನ ಈ ಆಲಿಂಗನ ನನ್ನೊಳಗೆ ಅದುವರೆಗೂ ಅನುಭವಕ್ಕೆ ಬಾರದ ಹೊಸ ವಾಂಛೆಗಳನ್ನು ಹುಟ್ಟು ಹಾಕಿತ್ತು. ಇಷ್ಟು ದಿನ ಅದುಮಿಟ್ಟುಕೊಂಡಿದ್ದ ಒಲವಿನ ಭಾವ ಒಮ್ಮೆಲೆ ಕಟ್ಟೆಯೊಡೆದಿತ್ತು. ಆ ಉದ್ವೇಗದಲ್ಲಿ ಅವನು ತನ್ನ ಪ್ರೇಮ ನಿವೇದನೆಯನ್ನು ಮಾಡಿದಾಗ ನನಗೂ ಇಲ್ಲ ಎನ್ನಲಾಗಲಿಲ್ಲ, ನಾನು ಅವನಿಗೆ ನನ್ನ ಪ್ರೀತಿಯನ್ನು ಹೇಳಿಕೊಂಡು ಸಂಭ್ರಮಿಸಿದೆವು.
ಕಾಲೇಜು ಮುಗಿದಮೇಲೆ ಜೀವನಕ್ಕಾಗಿ ಉದ್ಯೋಗ ಬೇಟೆಗೆ ಇಬ್ಬರೂ ಯುದ್ಧ ಸನ್ನದ್ಧರಾದೆವು. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಪ್ಲೇ ಮಾಡಿ ಪರೀಕ್ಷೆಯನ್ನು ಬರೆದೆವು. ಅವನಿಗೆ ಒಂದು ಒಳ್ಳೆಯ ಕೆಲಸ ಪ್ರಾಪ್ತಿ ಆಯ್ತು. ನನಗೆ ಮಾತ್ರ ಕೆಲಸ ಸಿಗಲೇ ಇಲ್ಲ. ಅದೇ ಬೇಜಾರಲ್ಲಿ ಇದ್ದ ನನಗೆ " ಸಾಕು ಬಿಡು ಇಬ್ಬರಲ್ಲಿ ಒಬ್ಬರಿಗಾದರೂ ಕೆಲಸ ಸಿಕ್ಕಿತಲ್ಲ, ಜೀವನಕ್ಕೆ ಏನು ತೊಂದರಯಿಲ್ಲವಲ್ಲ " ಎಂದು ಧೈರ್ಯ ತುಂಬಿದನು. ಲೈಫ್ ಸೆಟ್ಲ್ ಆದ ಮೇಲೆ ಇನ್ನೇನು ಮನೆಯಲ್ಲಿ ಹಿರಿಯರನ್ನು ಒಪ್ಪಿಸಿ ನನ್ನನ್ನು ಮದುವೆಯಾದ. ಅವರ ಮನೆಯಲ್ಲಿ ಮೊದಮೊದಲು ನನ್ನನ್ನು ಸೊಸೆಗಿಂತಲೂ ಹೆಚ್ಚಾಗಿ ಮಗಳಂತೆ ಕಂಡರು. ಆದರೆ ಈ ಪ್ರೀತಿ ವರ್ಷವಾಗುವುದರೊಳಗೆ ಕಡಿಮೆಯಾಯಿತು. ಕಾರಣ ಮದುವೆಯಾಗಿ ವರ್ಷವಾಗುತ್ತ ಬಂದರು ಅದೇಕೋ ನನ್ನಲ್ಲಿ ಒಂದು ಜೀವ ಮೊಳಕೆಯೊಡೆಯುವ ಲಕ್ಷಣವೇ ಕಾಣಲಿಲ್ಲ. ಅವನ ಮನೆಯವರು ನೇರವಾಗಿಯೇ ನನ್ನ ಕಿವಿಗೆ ಬೀಳುವಂತೆ ಮಾತನಾಡುತ್ತಿದ್ದರು." ಅದಕ್ಕೆ ಹೇಳೋದು ಹಿರಿಯರು ನೋಡಿದವಳನ್ನು ಮದುವೆಯಾಗಿದ್ದಿದ್ದರೆ ಹೀಗೇಕೆ ಆಗುತ್ತಿತ್ತು. ಈ ಹುಡುಗರು ಸೀನ ಅಮಲಿನಲ್ಲಿ ಹಿಂದು ಮುಂದು ನೋಡದೆ ಪ್ರೀತಿಸಿ ಬಿಟ್ಟು ಈಗ ನೋಡು ನಮ್ಮ ವಂಶ ಬೆಳೆಯುವ ಯಾವ ಲಕ್ಷಣವೂ ಕಾಣುತ್ತಿಲ್ಲ ". ಎಂದು ಮಾತನಾಡಿಕೊಳ್ಳುತ್ತಿರುವಾಗ ನನಗೂ ಕರುಣ ಕಿವಿಚಿದಂತೆ ಆಗುತ್ತಿತ್ತು. ನಾವು ಕೂಡ ಗಂಡ ಹೆಂಡತಿ ಚೆನ್ನಾಗಿಯೇ ಇದ್ದೆವು. ಅದೇಕೋ ನನ್ನಲ್ಲಿ ಕರುಳ ಕುಡಿ ಬರುವ ಸಾಧ್ಯತೆಗಳು ಕ್ಷೀಣಿಸಿದ್ದವು.
ಈ ಕಾರಣದಿಂದಲೇ ನಾನು ಯಾವುದೇ ಶುಭ ಸಮಾರಂಭಗಳಿಗೆ ಹೋಗುತ್ತಿರಲಿಲ್ಲ. ಹೋದಲ್ಲೆಲ್ಲ ಇದರ ಬಗ್ಗೆ ಎಲ್ಲರೂ ಕೇಳಿ ನನ್ನ ಮನಸ್ಸಿಗೆ ನೋವು ಉಂಟು ಮಾಡುತ್ತಿದ್ದರು. ನನಗೂ ಒಂದು ಮನಸ್ಸಿದೆ ಅದಕ್ಕೆ ನೋವಾಗುತ್ತದೆ ಎಂಬ ಒಂದು ಚೂರು ಕರುಣೆ ಇಲ್ಲದೆ ಅಲ್ಲಿ ನೆರೆದಿದ್ದ ಹೆಂಗಸರೆಲ್ಲಾ ಆಡಿಕೊಳ್ಳುತ್ತಿದ್ದರೆ ನನಗೆ 100 ಬಾಣಗಳಿಂದ ತಿಳಿದ ಆಗುತ್ತಿತ್ತು. ಅಲ್ಲಿ ಯಾವ ಕಾರ್ಯಗಳಲ್ಲೂ ನನಗೆ ಅವಕಾಶ ಕೊಡದಿದ್ದಾಗ ನನ್ನ ಮೇಲೆ ನನಗೇ ಬೇಸರವಾಗುತ್ತಿತ್ತು. ಮಕ್ಕಳು ಬೇಕು ಎಂಬ ಆಸೆ ನನಗೂ ಇದೆ. ಆದರೆ ಏನು ಮಾಡುವುದು ಅದೇಕೋ ನನಗೆ ಅದೃಷ್ಟ ಇಲ್ಲ ಅಂತ ಕಾಣಿಸುತ್ತದೆ. ನನ್ನ ಪರಿಸ್ಥಿತಿ ಜನಕ್ಕೆ ಅರ್ಥವಾಗಬೇಕಲ್ಲ. ಬರಿ ಚುಚ್ಚಿ ಮಾತನಾಡುತ್ತಾರೆ ಎಂದು ಅವನ ಬಳಿ ಹೇಳಿಕೊಂಡಾಗ ಅವನು "ನೋಡು ನೀನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡ. ದೇವರು ನಮಗೆ ಎಲ್ಲಾ ಕೊಟ್ಟಿದ್ದಾನೆ. ಆದರೆ ಇದೊಂದನ್ನು ಕೊಡಲು ಅವನಿಗೇಕೋ ಮನಸ್ಸು ಆಗಿಲ್ಲ . ನೀನು ಮಾತ್ರ ಯಾವುದೇ ಕಾರಣಕ್ಕೂ ನೊಂದುಕೊಳ್ಳಬೇಡ." ಎಂದು ಧೈರ್ಯ ತುಂಬುತ್ತಿದ್ದನು.
ಒಮ್ಮೆ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದಾಗ ವೈದ್ಯರು ಜನ್ಮದಲ್ಲಿ ನಿನಗೆ ಮಕ್ಕಳಾಗುವುದಿಲ್ಲ ಎಂದಾಗ ನನಗೆ ಬರಸಿಡಿಲು ಎರಗಿದಂತಾಗಿತ್ತು. ಆಗ ನನಗಾದ ದುಃಖಕ್ಕೆ ಅವನು ನೀಡಿದ ಸಾಂತ್ವನ ತಾಯಿಯನ್ನು ಮೀರಿಸಿತ್ತು. ನನ್ನ ಸಮಾಧಾನ ಪಡಿಸಲು ಅವನು ಪಟ್ಟ ಪಾಡು ಮಾತಿನಲ್ಲಿ ಹೇಳಲಾಗದು. ಅದೇ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ಅನಾಥ ಹೆಣ್ಣು ಮಗಳಿಗೆ ಹೆರಿಗೆಯಾಗಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಆ ತಾಯಿ ಅಸುನಿಗಿದಳಂತೆ. ದಾದಿಯರು ಈ ವಿಷಯವನ್ನು ವೈದ್ಯರ ಬಳಿ ಹೇಳುವಾಗ ಅನಾಥವಾದ ಮಗುವನ್ನು ಏನು ಮಾಡುವುದು ಎಂದು ಯೋಚಿಸುತ್ತಿರುವಾಗ, ನನ್ನವನು ಹೋಗಿ ವೈದ್ಯರ ಬಳಿ ಮಾತನಾಡಿ ಆ ಮಗುವನ್ನು ನಾವು ಸಾಕಿಕೊಳ್ಳುತ್ತೇವೆ, ನಮಗೆ ಕೊಡಿ ಎಂದು ಕೇಳುತ್ತಿದ್ದಾಗ ಆ ದೇವರು ನಗೆ ಎಂತಹ ಸ್ಥಿತಿ ತಂದನಲ್ಲ ಎಂದು ತುಂಬಾ ನೋವಾಯಿತು. ಅಲ್ಲದೆ ನನಗೋಸ್ಕರ ಅವನು ವೈದ್ಯರಲ್ಲಿ ಬೇಡಿಕೊಳ್ಳುತ್ತಿದ್ದನ್ನು ನೋಡಿ ಅವನ ಮೇಲೆ ನನ್ನ ಗೌರವ ಇನ್ನಷ್ಟು ಹೆಚ್ಚಾಗಿತ್ತು. ನನ್ನನ್ನು ಒಂದು ಮಾತು ಕೇಳದೆ ವೈದ್ಯರ ಬಳಿ ಮಾತನಾಡಿ ಮಗುವನ್ನು ದತ್ತು ತೆಗೆದುಕೊಳ್ಳಲು ತೀರ್ಮಾನಿಸಿದ್ದನು. ಆ ಮಗೂನ ತಂದು ನನ್ನ ಮಡಿಲಲ್ಲಿ ಹಾಕಿದಾಗ ನನ್ನೊಳಗಿನ ತಾಯಿ ಆ ಆನಂದವನ್ನು ಸಂಭ್ರಮಿಸಿದ್ದಳು.
ಚಿಕ್ಕ ಚಿಕ್ಕ ಕೈಕಾಲುಗಳು, ಮುದ್ದಾದ ಮುಖ ನನ್ನನ್ನು ಬಹುವಾಗಿ ಸೆಳೆಯಿತು. ಅದೇನು ಅನುಬಂಧವೋ ಕಾಣೆ ಮಗು ನನ್ನ ಮಡಿಲಿಗೆ ಬರುತ್ತಿದ್ದಂತೆ ಅಳುವುದನ್ನು ನಿಲ್ಲಿಸಿತು. ನನಗೆ ಈ ಮಗು ನನ್ನದೇ ಎನ್ನುವ ಆನಂದ ನನಗಾದರೆ, ತಾಯಿಯ ಬಿಸಿ ಅಪ್ಪುಗೆ ಸಿಕ್ಕ ನೆಮ್ಮದಿ ಆ ಕಂದನಿಗೆ ಆಗಿರಬೇಕು. ನಮ್ಮಿಬ್ಬರ ಸಂಬಂಧ ಬೆಸೆದ ಈ ಅನುಬಂಧ ನನ್ನ ಬದುಕಿನಲ್ಲಿ ಮತ್ತೆ ಆಶಾ ಕಿರಣ ಒಂದನ್ನು ಮೂಡಿಸಿತ್ತು. ನನ್ನ ಅತ್ತೆಯ ಮನೆಯವರಿಗೂ ಕೂಡ ನಮ್ಮ ಈ ನಿರ್ಧಾರವನ್ನು ಒಪ್ಪಿಕೊಳ್ಳುವ ಅನಿವಾರ್ಯತೆ ಇತ್ತು. ಅವರು ಕೂಡ ಖುಷಿಪಟ್ಟರು. ನಮ್ಮ ಬದುಕಿನಲ್ಲಿ ಮತ್ತೆ
ಮೊದಲಿನ ಸಂಭ್ರಮ ಮನೆ ಮಾಡಿತು. ನನಗಂತೂ ಸ್ವರ್ಗವೇ ಕೈಗೆ ಸಿಕ್ಕ ಸಂತೃಪ್ತಿ. ಮಗು ಬಂದ ಮೇಲೆ ನನಗೂ ಒಳ್ಳೆಯ ಕಡೆ ಕೆಲಸ ಸಿಕ್ಕಿತು. ನಮ್ಮ ಪುಟ್ಟ ಸಂಸಾರ ಆನಂದ ಸಾಗರವಾಗಿ ಸದಾ ಪ್ರಶಾಂತ ಅಲೆಗಳನ್ನು ಮನದ ತೀರಕೆ ತಂದು ಮುದಗೊಳಿಸುತ್ತಿತ್ತು. ನಮ್ಮ ಬದುಕು ನಿಜಕ್ಕೂ ಸಾರ್ಥಕತೆಯನ್ನು ಪಡೆದುಕೊಂಡಿತ್ತು. ನಾವೆಲ್ಲಾ ಮತ್ತೆ ಮೊದಲಿನ ಖುಷಿ, ಪ್ರೀತಿ, ಸಂಭ್ರಮದಿಂದ ಬದುಕುತ್ತಿದ್ದೇವೆ. ಹೆಣ್ಣಿಗೆ ತಾಯ್ತನ ಎಂಬುದು ಎಲ್ಲಾ ಸಂಪತ್ತಿಗೂ ಮಿಗಿಲಾದದ್ದು ಎಂದು ನನಗನಿಸುತ್ತಿದೆ. ಆ ಭಾಗ್ಯ ಕೊಟ್ಟ ನನ್ನ ಕಂದನಿಗೆ ನಾನು ಚಿರಋಣಿ. ನನ್ನನ್ನು ಇಷ್ಟೊಂದು ಪ್ರೀತಿಸಿದ ನನ್ನವನು ಉದಾರತೆಗೆ ನಾನು ಎಂದೆಂದೂ ಆಭಾರಿಯಾಗಿದ್ದೇನೆ. ಸುಖ ಸಂಸಾರಕ್ಕೆ ಮತ್ತೆ ಯಾವ ಕೊರತೆಯೂ ಇಲ್ಲದಂತೆ ದೇವರು ಕಾಪಾಡಿದ್ದಾನೆ. ಈಗ ನಿಜಕ್ಕೂ ಮನೆ ಸ್ವರ್ಗ ಸಮಾನ.
0144ಪಿಎಂ11112018
ಅಮು ಭಾವಜೀವಿ
ಚಿತ್ರದುರ್ಗ
No comments:
Post a Comment