Friday, June 21, 2019

*ನನ್ನವಳು*

ನನ್ನಡಿಗೆ ನುಡಿಯಾಗಿ
ಎದೆ ಗುಡಿಯ ದೇವಿಯಾಗಿ
ಹೊಂಗಿರಣದ ಭವಿಷ್ಯಕ್ಕೆ
ಭಾಷ್ಯವನ್ನು ಬರೆಯುವಳು

ಒಲವಿನ ಆಗಸದ ತುಂಬಾ
ಚಿತ್ರ ಚುಕ್ಕಿಗಳ ಬಿಂಬ
ಬಿದಿಗೆ ಚಂದ್ರಮನ
ಚೆಲುವಿನಾಕೆ ಇವಳು

ಚಂದನಕೆ ಸುವಾಸನೆಯಾಗಿ
ಬಾಳಲಿ ಸಮ ಭಾವನೆಯಿಂದ
ನೋವು ನಲಿವಿಗೆ ನೆರಳಾಗಿ
ಸೋಲುಗೆಲುವಿನ ಸೂತ್ರದವಳು

ಉಷೆಯ ಉಸಿರಾಗಿ
ಮುಸ್ಸಂಜೆ ಲಜ್ಜೆಯ ಕೆಂಪಾಗಿ
ಇರುಳ ಗೂಡಿಗೆ ಬೆಳಕ ನೀಡಿ
ಬಸವಳಿದ ಬದುಕಿಗೆ ಕಚಗುಳಿ ಇವಳು

ಬೇಸರಕ್ಕೆ ಹಕ್ಕಿಹಾಡು
ಸಂತೋಷಕ್ಕೆ ಜೇನುಗೂಡು
ಒಲವಿಗೆ ಮಲೆನಾಡು
ನನ್ನವಳ ಎದೆಗೂಡು

ಬೆಳಗ್ಗೆ ಮಳೆಯಾದ ಮೋಡ
ಬೆಳೆಗೆ ಹೊಸ ಕಳೆಯನಿತ್ತಿತು ನೋಡ
ನನ್ನವಳ ನಗೆ ಮಿಂಚಿನ ಸಂಗಡ
ಬಡಿದಾಡಿದರು ಗುಡುಗು-ಸಿಡಿಲು ಕೂಡ

ನನ್ನವಳು ನಾ ಕಂಡ ಬಗೆ
ಅವಳೆನ್ನೆದೆಯ ಸಂಪಿಗೆ
ಸ್ಪೂರ್ತಿ ಅವಳ ನಗೆ
ನಾನವಳ ಜೊತೆ ಬಾಳುವೆ ಸೊಂಪಗೆ

0615ಪಿಎಂ03042003

ಅಮು ಭಾವಜೀವಿ

ಅಮ್ಮು ಭಾವಜೀವಿ ಅಮ್ಮ ಭಾವಜೀವ

   

No comments:

Post a Comment