Saturday, June 22, 2019

*ಹೋಲಿಸಿಕೊಳ್ಳಬೇಡ ನಿನ್ನೊಳಗೆ ನಿನ್ನ ಸೇರಿಸಿಕೊಳ್ಳಬೇಡ*

ಹೌದು ಈ ಜಗತ್ತಿನಲ್ಲಿ ಒಬ್ಬರು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದರಲ್ಲೇ ತಮ್ಮೆಲ್ಲ ಶ್ರಮವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ . ನಮಗೆ ನಮ್ಮ ಬಲ ಗೊತ್ತಿದ್ದಂತೆ ನಮ್ಮ ದೌರ್ಬಲ್ಯವು ಗೊತ್ತಿರುತ್ತದೆ. ಆ ದೌರ್ಬಲ್ಯವನ್ನು ನಾವು ನಮ್ಮ ಆತ್ಮಸ್ಥೈರ್ಯದಿಂದ, ಅನುಭವದ ಅಗಾಧ ಸಾರದೊಳಗದ್ದಿ ನಾನು ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಛಲ ನಮ್ಮದಾಗಬೇಕು.

ಪ್ರಕೃತಿಯ ಎಲ್ಲಾ ಜೀವಿಗಳು ಸಸ್ಯಗಳನ್ನು ಒಮ್ಮೆ ನಾವು ಸೂಕ್ಷ್ಮವಾಗಿ ಗಮನಿಸಬೇಕು. ಅಲ್ಲಿ ಯಾವುದು ಯಾವುದನ್ನು ಹೋಲಿಸಿ ಕೊಳ್ಳದೆ ಸ್ವಸಾಮರ್ಥ್ಯದಿಂದ ಬದುಕನ್ನು ಸಾಗಿಸುವುದನ್ನು ಕಾಣುತ್ತೇವೆ. ಮಾಂಸಾಹಾರಿಗಳು ಎಷ್ಟೇ ಹಸಿವಿದ್ದರೂ ಯಥೇಚ್ಛ ಹಸುರಿನ ಆಗರವೇ ಕಣ್ಣಮುಂದಿದ್ದರೂ ಸಸ್ಯಹಾರಿ ಗಳೊಂದಿಗೆ ಹೋಲಿಕೆ ಮಾಡಿಕೊಂಡು ಜೀವನ ನಡೆಸುವುದಿಲ್ಲ. ಬದಲಾಗಿ ಸಸ್ಯಹಾರಿ ಪ್ರಾಣಿಗಳನ್ನು ಬೇಟೆಯಾಡಿಯೇ ನನ್ನ ಹೊಟ್ಟೆ ತುಂಬಿಸಿಕೊಳ್ಳಬೇಕು. ಎಷ್ಟೇ ದಟ್ಟಾರಣ್ಯ ವಿರಲಿ, ಭೀಕರ ಬರದ ಮರುಭೂಮಿ ಇರಲಿ ಸಸ್ಯಗಳು ತಾವಿರುವ ಜಾಗದ ಪರಿಸ್ಥಿತಿಗೆ ಹೊಂದಿಕೊಂಡು ಹೆಮ್ಮರವಾಗಿ ಬೆಳೆಯುತ್ತವೆ. ತನ್ನಲ್ಲಿನ ಆತ್ಮಬಲ ಒಂದನ್ನೇ ನಂಬಿಕೊಂಡು ಪರಿಸರದ ಸಮತೋಲನದಲ್ಲಿ ಭಾಗಿಯಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಂಡು ಬದುಕುತ್ತವೆ. ಒಂದು ಬಳ್ಳಿ ಹಬ್ಬುವ ಮುನ್ನ ಮರದ ಆಸರೆಯನ್ನು ಪಡೆದರೂ ಆನಂತರ ಅದು ಇಡೀ ಮರವನ್ನೇ ಆಕ್ರಮಿಸಿ ಮರದ ತಲೆ ಮೇಲೆ ಬೆಳೆದು ನಿಲ್ಲುತ್ತದೆ. ಮರ ದೊಡ್ಡದು ಅಲ್ಲಿ ನಾನು ಹೇಗೆ ಬೆಳೆಯಲಿ ಎಂದು ಅಂದುಕೊಂಡಿದ್ದರೆ ಬಳ್ಳಿಯ ಬೆಳವಣಿಗೆ ಅಸಾಧ್ಯವಾಗುವುದು.

ಮನುಷ್ಯ ಮಾತ್ರ ತನ್ನ ಪ್ರತಿಕ್ಷಣದ ಬದುಕನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುತ್ತಲೇ ಇರುತ್ತಾನೆ. ಇನ್ನೊಬ್ಬರ ಏಳಿಗೆಯನ್ನು ಕಂಡು ಕರಬುತ್ತಾನೆ. ನನಗೆ ಅವನಂತೆ ಆಗಲು ಸಾಧ್ಯವಿಲ್ಲವಲ್ಲ ಎಂದು ಕೊರಗುತ್ತಾ ಋಣಾತ್ಮಕವಾಗಿ ಚಿಂತಿಸುತ್ತಾ ಕೋರುತ್ತಾನೆಯೇ ಹೊರತು ಅವನು ಅವನ ದಾರಿಯಲ್ಲಿ ಸಾಗಿ ಸಾಧಕ ಎನಿಸಿದರೆ ತನಗೂ ಆ ಸಾಮರ್ಥ್ಯವಿದೆ, ನಾನು ನನ್ನ ದಾರಿಯಲ್ಲಿ ನಡೆದು ಅವನು ಸಾಧನೆಗೆ ಸಮಾನವಾಗಿ ನಿಲ್ಲುವೆನು ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದಿಲ್ಲ. " ಅಯ್ಯೋ ಅವನಿಗೆ ಎಲ್ಲರೂ ಸಹಾಯ ಮಾಡಿದರು. ನನಗೆ ಯಾರಿದ್ದಾರೆ ನಾನು ಪಡೆದಿದ್ದು ಇಷ್ಟೇ, ನನ್ನ ಹಣೆಬರಹ" ಎಂದು ತಲೆ ಚಚ್ಚಿಕೊಳ್ಳುವ ಬದಲು ತನ್ನ ಆತ್ಮಬಲ ಒಂದೇ ತನ್ನ ಸಂಗಾತಿ, ನಾನೇಕೆ ಸಾಧಕ ಆಗಲಾರೆ. ಏನೇ ಬರಲಿ ಸಾಧನೆ ಮಾಡಿಯೇ ತೀರುತ್ತೇನೆ ಎಂದು ಹೆಜ್ಜೆ ಮುಂದಿಟ್ಟರೆ ತನ್ನ ಸಾಧನೆಯ ಹಾದಿಯಲ್ಲಿ ಅರ್ಧ ಗೆದ್ದಂತೆ ಆಗುತ್ತದೆ.

ಇನ್ನೊಬ್ಬರ ಏಳಿಗೆಯನ್ನು ಕಂಡು ಕೊರಗುವ ಮನಸ್ಥಿತಿಯನ್ನು ನಾವು ಮೊದಲು ಬಿಡಬೇಕು. ಈ ಬದುಕು ನನ್ನದು ಸಾಧಿಸಲು ನನಗೆ ಹೆಚ್ಚು ಸಮಯಾವಕಾಶವಿಲ್ಲ ಸಾಧಿಸದೆ ಸತ್ತು ಹೋದರೆ ಈ ಜಗತ್ತಿನಲ್ಲಿ ನನ್ನ ಕುರುಹು ಏನೂ ಇರುವುದಿಲ್ಲ, ಹಾಗಾಗಿ ಇರುವ ಅಲ್ಪ ಸಮಯದಲ್ಲೇ ನಾನು ನನ್ನದೇ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಿ ಉಳಿದವರಿಗೆ ಮಾದರಿಯಾಗಿ ಬದುಕುತ್ತೇನೆ ಎಂಬ ಆತ್ಮ ವಿಶ್ವಾಸ ಗಳಿಸಿಕೊಳ್ಳಬೇಕು. ಇತರರೊಂದಿಗೆ ಹೋಲಿಸಿಕೊಂಡು ನಮ್ಮ ಸೋಲನ್ನು ನಾವೇ ಒಪ್ಪಿಕೊಳ್ಳಬಾರದು. ನಮ್ಮ ಇತಿಮಿತಿಯಲ್ಲಿಯೇ ಗತಿ ಬದಲಿಸಿಕೊಂಡು ಸಾಧನೆಯ ಗುರಿ ಮುಟ್ಟಿ ವಿಜೃಂಭಿಸಬೇಕು. ಸಾಧಿಸ ಹೊರಟಾಗ ನಾವು ಖಂಡಿತ ಒಬ್ಬಂಟಿ ಆಗಲಾರೆವು. ಏಕೆಂದರೆ ಸಾಧನೆಯ ಹಾದಿಯಲ್ಲಿ ನಾವೊಬ್ಬರೇ ಇರುವುದಿಲ್ಲ.
ಅಲ್ಲಿ ನಾನಾ ಥರದ ಸಾಧಕರು ಸಾಗುತ್ತಿರುತ್ತಾರೆ ಅವರೊಂದಿಗೆ ಹೆಜ್ಜೆಹಾಕುತ್ತಾ ಸಮಾನಮನಸ್ಕರ ಪ್ರೋತ್ಸಾಹ , ಹಿರಿತನದ ಅನುಭವದ ನುಡಿ , ಸಂಕೋಲೆಗಳಿಂದ ಹೊರಬರುವ ಚಾಕಚಕ್ಯತೆಯನ್ನು ಸಮಾನ ಮನಸ್ಥಿತಿಯಲ್ಲಿ ಸ್ವೀಕರಿಸಿ ನಮ್ಮ ಯಶಸ್ಸಿನಲ್ಲಿ ಅವುಗಳ ಪಾಲುದಾರಿಕೆಯಿಂದ ಗುರಿ ಸಾಧನೆಯ ಹಾದಿಯನ್ನು ಗಟ್ಟಿ ಗೊಳಿಸಿಕೊಳ್ಳಬೇಕು.

          ನಾವು ಬರುವಾಗ ಏನು ತಂದಿಲ್ಲ, ಅಂತೆಯೇ ಹೋಗುವಾಗಲೂ ಏನನ್ನೂ ಹೊತ್ತೊಯುವುದಿಲ್ಲ. ಎಲ್ಲವನ್ನೂ ಇಲ್ಲಿಯೇ ಕಲಿತು ತನ್ನದಾಗಿಸಿಕೊಂಡು ಅನುಭವಿಸಿ ಮತ್ತೆ ಇಲ್ಲಿಯೇ ಬಿಟ್ಟು ಹೋಗಲೇ ಬೇಕು. ನಾವು ಹುಟ್ಟಿದಾಗ ಅಳುತ್ತಿದ್ದರೆ ಜಗತ್ತು ನಗುತ್ತಿರುತ್ತದೆ. ಹಾಗೆಯೇ ನಾವು ಹೋಗುವಾಗ ನಗುನಗುತ್ತ ಹೋಗುತ್ತಿದ್ದರೆ ಜಗತ್ತು ನಮ್ಮನ್ನು ಕಣ್ಣೀರಿನ ವಿದಾಯ ಹೇಳುವಂತೆ ನಾವು ಬಾಳಬೇಕು. ಸಾಧಿಸುವ ಛಲವೊಂದಿದ್ದರೆ ಆಗದು ಎನ್ನುವ ಯಾವ ಕಾರ್ಯವು ಈ ಜಗತ್ತಿನಲ್ಲಿಲ್ಲ. ದೇಹದ ಅಂಗಗಳೇ ಊನವಾಗಿದ್ದರೂ ಬದುಕಿನ ಹೋರಾಟವನ್ನು ಗೆಲ್ಲುವ ಅಂಗವಿಕಲನ ಅಧಮ್ಯ ಆತ್ಮವಿಶ್ವಾಸ ಎಲ್ಲವೂ ಸರಿಯಾಗಿರುವ ನಮ್ಮಲ್ಲಿ ಬಂದರೆ ಸಾಧನೆ ಎಂಬುದು ಕಷ್ಟವೇನಲ್ಲ. ಕಾಲಿಲ್ಲದವನು ನಡೆಯುವವನೊಂದಿಗೆ ತನ್ನನ್ನು ಹೋಲಿಕೆ ಮಾಡಿಕೊಳ್ಳದೆ ಕುಂಟುತ್ತಾ ತೆವಳುತ್ತಲಾದರೂ ತನ್ನ ಪಾಲಿನ ಹಾದಿಯನ್ನು ಸವೆಸುತ್ತಾನೆ. ಅದನ್ನು ಸವಸಲೇಬೇಕಾದ ಅನಿವಾರ್ಯದ ಬದುಕು ಅವರದಾಗಿರುತ್ತದೆ. ಅವನು ಅಂಗವಿಕಲ ಎಂದು ಯಾರು ಬದುಕಿನುದ್ದಕ್ಕೂ ಅವನೊಂದಿಗೆ ಇರಲಾರರು. ಏಕೆಂದರೆ ಅವರವರ ಬದುಕು ಅವರಿಗೆ  ಇದ್ದೇ ಇರುತ್ತದೆ. ಸಮಯ ಬಂದಾಗ ದಾರಿ ತೋರಬಹುದು, ಸಹಾಯ ಮಾಡಬಹುದು. ಆದರೆ ಅಂತಿಮವಾಗಿ ಅವನ ಬದುಕನ್ನು ಅವನೇ ರೂಪಿಸಿಕೊಳ್ಳಬೇಕು. ಇಲ್ಲಿ ಹೋಲಿಕೆ ಮಾಡುತ್ತಾ ಕುಳಿತುಕೊಂಡರೆ ಏನೂ ಪ್ರಯೋಜನವಾಗುವುದಿಲ್ಲ. ತನ್ನೊಳಗಿನ ಸೋಲುವಂತಹ ಮನಸ್ಸನ್ನೂ ಗೆಲುವಿನತ್ತ ಕೊಂಡೊಯ್ಯುವ ದೃಢ ವಿಶ್ವಾಸ ಅವನದೇ ಆಗಿರಬೇಕು.
   
        ಕೊನೆಯದಾಗಿ ಹೋಲಿಕೆ ಸಾಧಕನ ಅಸ್ತ್ರವಾಗಬಾರದು ಬದಲಿಗೆ ಸ್ವಸಾಮರ್ಥ್ಯದ ಮೇಲಿನ ನಂಬಿಕೆಯೇ ಅವನ ಊರುಗೋಲಾಗಿ ಗುರಿಯನ್ನು ತಲುಪಿಸಬೇಕು. ಅದಕ್ಕೆ ಪ್ರಯತ್ನದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೀಳರಿಮೆಯ ಸುಳಿಗೆ ಸಿಲುಕದೆ ಎಚ್ಚರವಹಿಸಬೇಕು. ಅಂತಿಮವಾಗಿ ಗೆಲುವಿನ ಪತಾಕೆಯನ್ನು ಹಿಡಿದು ಇಡಿ ಜಗತ್ತಿಗೆ ತನ್ನ ಸಾಮರ್ಥ್ಯವೇನೆಂಬುದನ್ನು ಹೆಮ್ಮೆಯಿಂದ ತೋರಿಸಬೇಕು. ಆ ಸಾಧನೆಯನ್ನು ಎಲ್ಲರೂ ಕೊಂಡಾಡುವಂತೆ ಮಾಡಬೇಕು.ಇದೇ ನಮ್ಮ ಬದುಕಿನ ಅಂತಿಮ ಯಶಸ್ಸು ಆಗಿರಬೇಕು. ಎರಡು ಹಳಿಗಳು ಎಂದೂ ಸೇರುವುದಿಲ್ಲ ಆದರೆ ಅವು ಮುಟ್ಟಿಸುವ ಗುರಿ ಎಂದಿಗೂ ಹುಸಿಯಾಗುವುದಿಲ್ಲ. ಹಾಗೆ ನಮ್ಮ ನಮ್ಮ ಬದುಕಿನಲ್ಲಿ ನಾವು ಸಾಧಕರಾಗೋಣ.

ಅಪ್ಪಾಜಿ ಎ ಮುಸ್ಟೂರು ಶಿಕ್ಷಕರು ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ
ಪಿನ್ 577528
ಮೊಬೈಲ್ 8496819281

No comments:

Post a Comment