Saturday, June 22, 2019

ತಾವೇ ಹೊತ್ತು ಹೆತ್ತು ಸಾಕಿ ಸಲುಹಿ, ಕನಸಿನಲ್ಲಿಯೂ ಕೆಡುಕನ್ನು ಬಯಸದ ಹೆತ್ತವರು ತಮ್ಮ ಮಕ್ಕಳನ್ನು ತಾವೇ ಹಾಳು ಮಾಡುವುದುಂಟೆ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದರೆ ಇದು ನಿಜ. ಯಾವ ಹೆತ್ತವರೂ ತಮ್ಮ ಮಕ್ಕಳು ಹಾಳಾಗಿ ಹೋಗಲಿ ಎಂದು ಬಯಸುವುದಿಲ್ಲವಾದರೂ ಹಲವು ಸಂದರ್ಭಗಳಲ್ಲಿ ಮಕ್ಕಳು ಹಾಳಾಗಲು ಪಾಲಕರೇ ಕಾರಣ ಆಗುತ್ತಿರುವುದು ಇಂದಿನ ಸತ್ಯ. ಹಾಗೆಂದು ಇದನ್ನು ಹೆತ್ತವರು ಅರಿತು ಮಾಡುವ ಕೆಲಸವಲ್ಲ, ತಂತಾನೇ ಆಗಿ ಹೋಗುವ ಕೆಲಸವಾಗಿದೆ.
ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರಿಗೆ ಇರಬೇಕಾದ ಆಸಕ್ತಿ, ಅನುಭವ, ಕಾಳಜಿ, ಪರಿಜ್ಞಾನಗಳಲ್ಲಿನ ಕೊರತೆ.
ಅಜಾಗರೂಕತೆ, ನಿರ್ಲಕ್ಷ್ಯತನ, ಬೇಜವಾಬ್ದಾರಿತನ ಹಾಗೂ ಮಕ್ಕಳ ಮೇಲಿರುವ ಕುರುಡು ಮೋಹ.
ಸಮಯದ ಕೊರತೆ,”spending time and good parenting is more important than merely spending money on them’ ಎಂಬಂತೆ, ಕೇವಲ ಹಣ ಬಲದಿಂದ ಮಕ್ಕಳನ್ನು ಒಳ್ಳೆಯ ವ್ಯಕ್ತಿಗಳನ್ನಾಗಿ ಮಾಡಲಾಗದು. ತಾವೇ ಭ್ರಷ್ಟರಾದಾಗ, ಚಾರಿತ್ರ್ಯಹೀನರಾದಾಗ ಮಕ್ಕಳಿಗೆ ಬುದ್ಧಿ ಹೇಳುವ ನೈತಿಕ ಹಕ್ಕನ್ನು ಹೆತ್ತವರು ಕಳೆದುಕೊಳ್ಳುತ್ತಾರೆ. ಒಂದೋ ಎರಡೋ ಮಕ್ಕಳು ಇರುವ ಈ ದಿನಗಳಲ್ಲಿ ಅವರನ್ನು ಹೆಚ್ಚು ವಿರೋಧಿಸಿದರೆ ಎಲ್ಲಿ ಮನೆ ಬಿಟ್ಟು ಹೋದಾರೋ ಎಂಬ ಭಯ.* ಈ ಕಾರಣಗಳ ಹೊರತಾಗಿ ಅವಿಭಕ್ತ ಕುಟುಂಬಗಳ ಕೊರತೆ, ಸಿಂಗಲ್ ಚೈಲ್ಡ್ ಸಿಂಡ್ರೋಮ್ ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳಿಗೆ ಹೊರಜಗತ್ತಿನ ಸಂಪರ್ಕಗಳು ಹೆಚ್ಚಾಗುತ್ತಿವೆ. ಎಲ್ಲವನ್ನೂ ಪ್ರಶ್ನಿಸುವ ಮತ್ತು ಹಕ್ಕನ್ನು ಮಂಡಿಸುವ ಮನೋಭಾವ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಕಷ್ಟಗಳ- ಬಡತನದ ಅರಿವಿಲ್ಲದಿರುವುದು, ಮೌಲ್ಯಗಳ ಕೊರತೆ ಇವೂ ಕಾರಣವಾಗುತ್ತವೆ.
ಮಹಾಭಾರತದ ಯುದ್ಧಕ್ಕೆ ಮುನ್ನ ಶ್ರೀಕೃಷ್ಣ ಧೃತರಾಷ್ಟ್ರನಿಗೆ ಹೇಳುತ್ತಾನೆ, ‘ನಾವು ಮನಸ್ಸು ಮಾಡಿದರೆ ಅನವಶ್ಯಕವಾದ ಯುದ್ಧವನ್ನು ನಿಲ್ಲಿಸಬಹುದು. ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ನಾನು ಪಾಂಡವರಿಗೆ ತಿಳಿಸುತ್ತೇನೆ. ನೀವು ನಿನ್ನ ಪುತ್ರ ದುರ್ಯೋಧನನಿಗೆ ಹೇಳು’ ಎಂದಾದ ಧೃತರಾಷ್ಟ್ರ, ‘ನಿನ್ನ ಮಾತನ್ನು ಪಾಂಡವರು ಕೇಳಬಹುದು, ಆದರೆ ನನ್ನ ಮಾತನ್ನು ದುರ್ಯೋಧನ ಕೇಳಲಾರ’ ಎನ್ನುತ್ತಾ ಪುತ್ರನ ನಾಶಕ್ಕೆ ಅವನೇ ಕಾರಣನಾಗುತ್ತಾನೆ. ಹೀಗೆ ನಿತ್ಯಜೀವನದಲ್ಲಿಯೂ ಆಗುತ್ತಿದೆ.
ಸಾಮಾನ್ಯವಾಗಿ ಹೆತ್ತವರು ತಮ್ಮ ಮಕ್ಕಳನ್ನು ಹೇಗೆ ಹಾಳು ಮಾಡುತ್ತಾರೆ ಎಂದರೆ;
ವಾಹನ, ಮೊಬೈಲ್, ಬಲೆ ಬಾಳುವ ಆಭರಣ, ಬಟ್ಟೆ-ಬರೆ ಏನೇ ಆದರೂ ಸರಿ, ‘ನಿಮಗಿದು ಏಕೆ ಬೇಕು?’ ಎಂದು ಮಕ್ಕಳಲ್ಲಿ ಕೇಳದೇ ಅವಶ್ಯ ಇರಲಿ, ಇಲ್ಲದಿರಲಿ, ಎಷ್ಟೇ ಕಷ್ಟವಾದರೂ ಸರಿ… ಮಕ್ಕಳು ಕೇಳಿದಾಕ್ಷಣ ಕೊಟ್ಟುಬಿಡುತ್ತಾರೆ. ಇನ್ನು ಕೆಲವು ಸಲ ಮಕ್ಕಳು ಕೇಳದೇನೇ ಕೊಡುವುದೂ ಉಂಟು. ಈ ರೀತಿ ಅಪ್ಪ-ಅಮ್ಮ ಎಟಿಎಂಗಳಂತೆ ಆದರೆ ಮಕ್ಕಳು ಇನ್ನೂ ಬೇಗ ಹಾಳಾಗಿ ಹೋಗುತ್ತಾರೆ. ಇದರ ಅರ್ಥ ಮಕ್ಕಳನ್ನು ಬಡತನದಲ್ಲಿ ಬೆಳೆಸಬೇಕು ಎಂದಲ್ಲ. ಆದರೆ ಬಡತನದ ಪರಿಚಯವೂ ಅವರಲ್ಲಿ ಇರಲಿ ಎಂಬುದು. ಅವರಿಗೆ ಅತೀ ಅವಶ್ಯ ಎನಿಸಿರುವುದನ್ನು ಮಾತ್ರ ನೀಡಿ, ಐಷಾರಾಮಿ ವಸ್ತುಗಳನ್ನಲ್ಲ. * ಮಕ್ಕಳು ತಪು್ಪ ಕೆಲಸಗಳನ್ನು ಮಾಡಿದಾಗಲೂ ನೋಡಿಯೂ ನೋಡದಂತೆ ಇರುವುದು, ಕೇಳಿಯೂ ಕೇಳದಂತೆ ಇರುವುದು, ಅವರ ತಪು್ಪಗಳನ್ನು ಹೇಳಿದವರ ಮೇಲೆಯೇ ಸಿಟ್ಟಾಗಿ, ಮಕ್ಕಳ ಪರವಾಗಿ ವಾದ ಮಾಡುತ್ತಾ ಅವರನ್ನು ರಕ್ಷಣೆ ಮಾಡಿ, ತಪು್ಪಗಳನ್ನು ಮುಚ್ಚಿ ಹಾಕುವುದರಿಂದಲೂ ಮಕ್ಕಳು ಹಾಳಾಗಿ ಹೋಗುತ್ತಾರೆ. * ಮಕ್ಕಳು ಪರೀಕ್ಷೆಯಲ್ಲಿ ಫೇಲಾದಾಗ, ಅದಕ್ಕೆ ಕಾರಣಗಳನ್ನು ಹುಡುಕಿ ಮುಂದಿನ ಬಾರಿ ಪಾಸಾಗಲು ಸಹಕರಿಸುವ ಬದಲಾಗಿ, ಅವರ ಶಿಕ್ಷಕರನ್ನು ಇಲ್ಲವೇ ಆ ಶಾಲೆಯನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ‘ಪಾಸಾದರೆ, ನನ್ನ ಮಗಳು/ಮಗ ಪಾಸಾದರು; ಫೇಲಾದರೆ ಮೇಷ್ಟ್ರು ಫೇಲ್ ಮಾಡಿದರು’ ಎನ್ನುವ ಮನೋಭಾವ ಈಗೀಗ ಹೆಚ್ಚಾಗುತ್ತಿದೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. * ಅವಶ್ಯಕತೆಗಳಿಗಿಂತ ಹೆಚ್ಚಿನ ಮೊತ್ತದ ಪಾಕೆಟ್ ಮನಿ ನೀಡಿ, ಅದರ ಖರ್ಚಿನ ವಿವರಗಳನ್ನು ಕೇಳದಿರುವುದು ತಪು್ಪ. ಈ ಹಣದಿಂದ ಮಕ್ಕಳು ಕೆಟ್ಟ ವ್ಯಸನಗಳಿಗೆ ಬಲಿಯಾದರೆ, ಅದಕ್ಕೆ ಪಾಲಕರೇ ನೇರ ಹೊಣೆಯಾಗುತ್ತಾರೆ. * ಮಕ್ಕಳ ಪಿತ್ತ ನೆತ್ತಿಗೆ ಏರುವಷ್ಟು, ಮಕ್ಕಳನ್ನು ಎಲ್ಲರ ಎದುರಿಗೆ ಹೊಗಳುವುದು ಕೂಡ ತಪು್ಪ. ಆ ಎಳೆ ವಯಸ್ಸಿನಲ್ಲಿ ಹೊಗಳಿಕೆಯನ್ನು ಜೀರ್ಣಿಸಿಕೊಳ್ಳುವಷ್ಟು ಪ್ರಬುದ್ಧತೆ ಮಕ್ಕಳಲ್ಲಿ ಇರುವುದಿಲ್ಲ. ಆದ್ದರಿಂದ ಒಂದು ರೀತಿಯ ಜಂಭ ಅವರನ್ನು ಆವರಿಸಿ ಭವಿಷ್ಯದಲ್ಲಿ ಕೆಡುಕು ಉಂಟಾಗುತ್ತದೆ. *ಅತಿಯಾದ ಸ್ವಾತಂತ್ರ್ಯ ನೀಡುವುದು, ಮಧ್ಯರಾತ್ರಿಯವರೆಗೂ ಟೀವಿ ನೋಡಲು ಅನುಮತಿ ನೀಡುವುದು, ಮನೆಗೆ ತಡವಾಗಿ ಬಂದರೂ, ಕುಡಿದು ಬಂದರೂ ಪ್ರಶ್ನಿಸದಿರುವುದು, ಬಾಯ್ಫ್ರೆಂಡ್/ ಗರ್ಲ್​ಫ್ರೆಂಡ್ ಎಂತೆಲ್ಲಾ ಸುತ್ತಾಡಿ ಸುತ್ತಾಡಿ ಬಂದರೂ ವಿಚಾರಿಸದಿರುವುದು… ಇವೆಲ್ಲವೂ ಮಕ್ಕಳನ್ನು ಹಾಳು ಮಾಡುವ ಇತರ ವಿಧಾನಗಳು. * ಕೆಟ್ಟವರ ಸಂಪರ್ಕದಿಂದಲೂ ಮಕ್ಕಳು ಹಾಳಾಗಿ ಹೋಗುವುದು ಉಂಟು. ಆದ್ದರಿಂದ ಅವರ ಗೆಳೆಯರ ಬಗ್ಗೆ ನಿಗಾ ಇರಲಿ.
ಮಕ್ಕಳಿಗೆ ಬಾಲ್ಯದಿಂದಲೇ ಶಿಸ್ತು, ಒಳ್ಳೆಯ ಅಭ್ಯಾಸ-ಹವ್ಯಾಸ, ಸಮಯ ಪಾಲನೆ, ಸೌಜನ್ಯತೆಗಳನ್ನು ಕಲಿಸಿಕೊಡಿ. ಒಂದು ವೇಳೆ ಅವರ ಹೆಸರಿನಲ್ಲಿ ಆಸ್ತಿ ಇದ್ದರೆ, ಅವರಿಗೆ ಮೊದಲೇ ತಿಳಿಸುವುದು ಬೇಡ. ಶ್ರೀಮಂತಿಕೆ ಬದುಕನ್ನು ಬದಲಿಸುತ್ತದೆ ಎನ್ನುವುದು ನೆನಪಿರಲಿ. ಈ ಹಿನ್ನೆಲೆಯಲ್ಲಿ ಹೆತ್ತವರು ಮಕ್ಕಳ ಪೋಷಕರಾಗಲಿ, ರಕ್ಷಕರಾಗಿ, ಶಿಕ್ಷಕರಾಗಿ, ಮಾರ್ಗದರ್ಶಕರಾಗಿ ಜೀವನಪರ್ಯಂತ ನೆರವಾಗಬೇಕು. ಮಕ್ಕಳು ತಪು್ಪ ಮಾಡಿದಾಗಲೆಲ್ಲಾ ತಿದ್ದಿ ತೀಡಬೇಕು. ಅವರಲ್ಲಿನ ತಪು್ಪ ಹುಡುಕುವುದಕ್ಕಿಂತ ಮುಂಚೆ ತಪು್ಪ ಮಾಡದಂತೆ ಮಂಜಾಗರೂಕತೆ ವಹಿಸುವುದು ಕ್ಷೇಮ. ಮಕ್ಕಳ ಮೇಲೆ ಮೋಹ ಇರಲಿ, ಆದರೆ ಕುರುಡ ವ್ಯಾಮೋಹ ಬೇಡ.

No comments:

Post a Comment