Friday, June 21, 2019

ಅವಳೊಂದು ಪ್ರೀತಿಯ ಚಿಲುಮೆ.ಅವನೋ ಪ್ರಶಾಂತ ಕುಲುಮೆ. ಅವಳಿಗೆ ಬದುಕನ್ನೇ  ಹಬ್ಬವಾಗಿಸುವ ಹಂಬಲ, ಅವನಿಗೆ ಹಬ್ಬದಲ್ಲೂ ಪ್ರಯೋಜನ ಪಡೆಯುವ ಛಲ. ಅದು ಹೇಗೋ ಇಬ್ಬರೂ ಪ್ರೀತಿಯ ಬಲೆಗೆ ಬಿದ್ದರು.  ಒಬ್ಬರಿಗೊಬ್ಬರು ಅನುರಕ್ತರಾದರೂ. ಅನುಬಂಧ ಬೆಸೆದುಕೊಂಡ ಅವರು ಅನುರೂಪ ಜೋಡಿಯಾದರು.

ದಿನದ ಪ್ರಾರಂಭವನ್ನು ಸ್ನಾನ ತುಳಸೀ ಪೂಜೆಯೊಂದಿಗೆ ಪ್ರಾರಂಭಿಸುವ ಅವಳಿಗೆ ಅವನು ಏಳುವ ಮುಂಚೆಯೇ ಮನೆಗೆಲಸವನ್ನು ಮುಗಿಸಿಯೂ ದುಡಿಯದೆ ಅವನು ಮಲಗಿರುವಲ್ಲಿಗೇ ಕಾಫಿ ತಂದು ಅವನನ್ನು ತರ್ಲೆ  ಎಬ್ಬಿಸುವ ವರೆಗೂ ಪುರುಸೊತ್ತಿಲ್ಲದ ಕಾಯಕ. ಅವನೋ software ಕಂಪನಿಯಲ್ಲಿ ದಿನವೆಲ್ಲಾ ಕೂತಲ್ಲಿಯೇ ಕೂತು ಕಂಪ್ಯೂಟರನ್ನು  ಒತ್ತಿ ಒತ್ತಿ  ಸುಸ್ತಾಗಿ ರಾತ್ರಿ ಮಲಗಿದವನು ಬೆಳಗ್ಗೆ ಏಳುವಾಗ ಉಲ್ಲಾಸವಿರದ ನೀರಸ ಭಾವದ ನಿರ್ಜೀವ. ಒಂದು ನಗುವಿಲ್ಲ, ಒಂದು ಹೊಗಳಿಕೆ ಇಲ್ಲ.

     ಬದುಕಿನ ಯಾನದಲ್ಲಿ ಜೊತೆಯಾದ ಅವರಲ್ಲಿ ಅಜಗಜಾಂತರ ವ್ಯತ್ಯಾಸ. ಅವಳಿಗೆ ಜೀವನವೇ ಸ್ಪೂರ್ತಿ, ಅವನಿಗೋ ಬದುಕು ನಿರಂತರ ತಿರುಗುವ ಗಡಿಯಾರದ ಮುಳ್ಳಿನ ರೀತಿ. ಅವನನ್ನು ಕಚೇರಿಗೆ ಅತಿ ಉಲ್ಲಾಸದಿಂದ ಕಳಿಸುವ ಅವಳಿಗೆ ದಿನವೆಲ್ಲ ದೂಡುವುದೇ ಭಾರವಾದರೂ , ಸಂಜೆ ಅವನಿಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತ ಬೇಸರದಿಂದ ಎದ್ದು ಬಂದ ಫೀನಿಕ್ಸ್ ನಂತೆ. ಅವನು ಆ ಮೂಕ ಕಂಪ್ಯೂಟರ್ನ ಜೊತೆ ಒಡನಾಡಿ. ಅಕ್ಷರಶಃ ಕಂಪ್ಯೂಟರಿನಂತೆಯೇ ಮೂಕವಾಗಿ ಹೇಳಿದ್ದಷ್ಟೇ ಉತ್ತರಿಸುವ ಮಿತಭಾಷಿ. ಅವಳ ನಗು, ತಮಾಷೆ , ಹರಟೆಗಳಿಗೆ ಎಲ್ಲ ಪ್ರತಿಕ್ರಿಯಿಸಲು ಆಗದಷ್ಟು ನಿರ್ಭಾವುಕ ನಿರಾಶಾದಾಯಕ.

      ಅವರು ಮೊದಲಲ್ಲ ಹೀಗಿರಲಿಲ್ಲ. ತುಂಬಾ ಚುರುಕಾದ, ಅಷ್ಟೇ ನಯವಾದ ವಿನಯವಂತ ಪ್ರತಿಭಾವಂತ. ಶಾಲೆಯಲ್ಲಿ ಎಲ್ಲರ ನೆಚ್ಚಿನ ಸ್ನೇಹಿತ. ಓದಿನಲ್ಲೂ ಮುಂದು. ಸ್ಪುರದ್ರೂಪಿಯಾದ ಅವನನ್ನು ಸುತ್ತುವರಿದ ಹತ್ತಾರು ಹುಡುಗ ಹುಡುಗಿಯರ ಗುಂಪು ಕ್ಷಣ ತೊರೆಯದಂತೆ ಸೇರಿರುತ್ತಿದ್ದರು. ಅವರನ್ನೆಲ್ಲ ತನ್ನ ತುಂಟ ನಗುವಿನಿಂದ ಸದಾ ನಗೆಗಡಲಲ್ಲಿ ತೇಲಿಸುತ್ತಿದ್ದ ನಾವಿಕ. ಅವನ ಸಂಗಡ ಇರುವುದೇ ಅವರಿಗೊಂದು ಸ್ವರ್ಗದಂತೆ. ಹೀಗಿದ್ದ ಅವನು ಉನ್ನತ software ಕಂಪನಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ.ಅಲ್ಲೇ ತನ್ನ ಸಹಾಯಕಿ ಆಗಿದ್ದ ಅವಳನ್ನು ಮೆಚ್ಚಿದ. ಅವಳ ಕಾರ್ಯಕ್ಷಮತೆಯನ್ನು ಕಂಡು ಮನಸೋತ. ಕೆಲವೇ ದಿನಗಳಲ್ಲಿ ತನ್ನ ಪ್ರೀತಿಯನ್ನು ನಿವೇದಿಸಿ ಅವಳನ್ನು ವರಿಸಿದ.

ಎಂದಿನಂತೆ ಇಬ್ಬರೂ ದಿನಾಲು ಕಚೇರಿಗೆ ಜೊತೆಯಲ್ಲೇ ಹೋಗುತ್ತಿದ್ದರು. ದಿನವೆಲ್ಲ ಒಟ್ಟಿಗೆ ದುಡಿಯುತ್ತಿದ್ದರು. ಕೈತುಂಬಾ ಸಂಬಳ, ಸುಖಮಯ ಜೀವನ ಅವರದಾಗಿತ್ತು. ಹೀಗೆ ಕೆಲ ದಿನಗಳು ಕಳೆದವು. ಅವಳು ಅದೇ ಸ್ಪೂರ್ತಿಯ ಚಿಲುಮೆ,ಅದೇ ಲವಲವಿಕೆ, ಅವನೋ ದಿನೇದಿನೇ ಕಾರ್ಯದೊತ್ತಡ ದಿಂದ ಮೌನಿಯಾದ, ಕಾಯಕ ಧ್ಯಾನಿಯಾದ, ಕಂಪನಿಯ ಉನ್ನತ ಹುದ್ದೆಗೇರಿದ. ತನ್ನವಳನ್ನು ದುಡಿಮೆ ಸಾಕೆಂದು ಬಿಡಿಸಿ ಮನೆಯಲ್ಲಿರಿಸಿ ನಿತ್ಯ ಕಂಪನಿಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ದುಡಿದು ಸುಸ್ತಾಗಿ ಮನೆಗೆ ಬರುತ್ತಿದ್ದ. ಪ್ರತಿ ಸಂಜೆ ಅವಳು ಆ ಲವಲವಿಕೆಯ ನಗುಮುಖದಿಂದ ಸ್ವಾಗತಿಸಿದರೂ ಅವನದು ಅದೇಕೋ ಅನುರಾಗವಿಲ್ಲದ ಮೌನರಾಗ ನಿರ್ಭಾವದ ಆವೇಗ.

     ದಿನವೆಲ್ಲಾ ದುಡಿದು ದುಡಿದು ದಣಿದು ಬಂದ ಅವನಲ್ಲಿನ ದಣಿವನ್ನು ನಿವಾರಿಸುವುದೇ ಅವಳಿಗೊಂದು ಸವಾಲು. ಆದರೂ ಅವಳು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಳು. ಎಂದಿಗೂ ಅವನ ಮೇಲೆ ಬೇಸರ ಪಟ್ಟು ಕೊಳ್ಳುತ್ತಿರಲಿಲ್ಲ. ಅವನೋ ಅವಳ ಆ ತರಲೆ ತುಂಟಾಟಕ್ಕೆ ಕೆಲವು ಬಾರಿ ರೇಗಿದ್ದೂ ಉಂಟು. ಪಟಪಟ ಮಾತಾಡುವ ಅವಳಿಗೆ ಸದಾ ಮೌನಿಯಾದ ಇವನು ನಿರಾಸೆಯನ್ನು ತಂದರೂ ಅದನೆಂದೂ ಮನಸ್ಸಿಗೆ ಹಾಕಿಕೊಳ್ಳುತ್ತಿರಲಿಲ್ಲ.

  ಅವನು ಬರುಬರುತ್ತಾ ಒಂಟಿತನವನ್ನು ಇಷ್ಟಪಡುತ್ತಿದ್ದ.ಅವಳನ್ನು ಕೇವಲ ತನ್ನ ಮನೆಯ ಚಾಕರಿಗೆ ಸಂಬಳವಿಲ್ಲದ ಕೆಲಸದವಳಂತೆ ಕಂಡ. ತನ್ನ ಬೇಕು ಬೇಡಗಳನ್ನು ಈಡೇರಿಸುವ ಅವಳ ಇಷ್ಟ-ಕಷ್ಟಗಳನ್ನು ಮರೆತೇ ಬಿಟ್ಟ. ಎಲ್ಲರೂ ವಾರಂತ್ಯದಲ್ಲಿ ಮೋಜು ಮಸ್ತಿ ಅಂತ ದಿನವಿಡೀ mall ಪಾರ್ಕ್ ಪಬ್ಬುಗಳಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ಅವರಿಬ್ಬರೂ ಖುಷಿಯಿಂದ ಹೊರಹೋಗದೆ ತಿಂಗಳುಗಳೇ ಕಳೆದಿವೆ. ಆದರೂ ಅದನ್ನು ಎಂದು ಅವಳು ಬೇಸರವಾಗಿ ಪರಿವರ್ತನೆಯಾಗದಂತೆ ಕಾಪಾಡಿಕೊಂಡು ಬಂದಳು. ದಾಸಿಯಂತೆ ಅವನ ಸೇವೆಯಲ್ಲಿ ಸುಖವನ್ನು ನೆಮ್ಮ ದಿಯನ್ನು ಕಂಡುಕೊಂಡ ಪ್ರಬುದ್ಧ ಹೆಣ್ಣು ಮಗಳವಳು.

ಬಾಲ್ಯದಲ್ಲಿ ಓದಿನಲ್ಲಿ ಇಬ್ಬರೂ ಪ್ರತಿಭಾವಂತರು. ಪ್ರತಿವರ್ಷವೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುತ್ತಿದ್ದರು. ತನ್ನ ವಿದ್ವತ್ತಿನಿಂದಲೇ ಒಳ್ಳೆಯ ಕಂಪನಿಯಲ್ಲಿ ಕೆಲಸಕ್ಕೆ ಗಿಟ್ಟಿಸಿ ಸಾಕಷ್ಟು ಹಣ ಸಂಪಾದಿಸಿ ಯೌವನವನ್ನೆಲ್ಲ ದುಡಿಮೆಗಾಗಿಯೇ ಕಳೆದರು. ಒಂದು ದೊಡ್ಡ ಕಂಪನಿಯ ಜವಾಬ್ದಾರಿಯಲ್ಲಿ ಯಶಸ್ಸನ್ನು ಗಳಿಸಿದನು. ತನ್ನ ಮನೆಯಲ್ಲಿ ತನಗಾಗಿ ಕಾಯುವ ತನ್ನವಳ ಸುಖ, ನೆಮ್ಮದಿಯನ್ನು ಕೊಡುವಲ್ಲಿ ಸಂಪೂರ್ಣ ಸೋತು ಹೋದನು. ತನ್ನವನ ಯಶಸ್ಸಿನ ಹಿಂದೆ ನೆರಳಾಗಿ ಇದ್ದವಳು. ಬೇಸರದ ಬೆಳಕಲ್ಲಿ ಮರೆಯಾದರೂ ಅವನಿಗಾಗಿ ಸದಾ ಹಣತೆಯಾಗಿ ಉರಿದಳು. ಪ್ರೀತಿಯ ಸಿರಿಯನ್ನೇ ಅವನಿಗಾಗಿ ಧಾರೆಯೆರೆದರ
ಳು. ಸಭ್ಯ ಗೃಹಿಣಿಯಾಗಿ ಸಾಕಾರಗೊಂಡಳು.

ಬದುಕಿನ ಬಂಡಿ ಹೀಗೆಯೇ ಸಾಗಿಬಂತು. ಸಾಕಷ್ಟು ಹಣ, ಹೆಸರು, ಸಂಪಾದಿಸಿದ ಕೊನೆಗೆ ನಿವೃತ್ತಿ ಪಡೆದ ಅವನಿಗೆ ಈಗ ಅವಳೇ ಆಸರೆ. ದಣಿದು ಬಸವಳಿದ ಅವನಲ್ಲಿ ಮತ್ತೆ ಜೀವನ ಪ್ರೀತಿಯನ್ನು ಚಿಮ್ಮಿಸುವ ಚಿಲುಮೆಯಾಗಿ ಅವಳಿದ್ದಳು. ಒಲುಮೆಯಿಂದ ಉಳಿದ ಪಯಣಕೆ ಜೊತೆಯಾದಳು. ಬೇಸರವಿಲ್ಲದೆ ಕೆಸರಿನಲ್ಲಿಯೂ ಅರಳಿದ ಕಮಲದಂತಾದಳು.

ಅಮು ಭಾವಜೀವಿ
   

No comments:

Post a Comment