Friday, June 21, 2019

*ಬ್ರಹ್ಮಾಸ್ತ್ರ*

ಖಡ್ಗಕ್ಕಿಂತ ಹರಿತ ಲೇಖನಿ
ಅದುವೆ ಸತ್ಯದ ಮಾರ್ದನಿ

ಬೀದಿಗಿಳಿದು ಹೋರಾಡದೆ
ರಕ್ತದ ಕೋಡಿಯನು ಹರಿಸದೆ
ಉಪವಾಸ ಸತ್ಯಾಗ್ರಹ ಕೂರದೆ
ಕಾಗದದ ರಣಾಂಗಣದಲ್ಲಿ
ಹೋರಾಡುವ ಸೈನಿಕ
ಲೇಖನಿ ಹಿಡಿದ ಲೇಖಕ

ಅನ್ಯಾಯದ ವಿರುದ್ಧ ಧ್ವನಿಯೆತ್ತಿ
ನ್ಯಾಯ ಪರಿಪಾಲನೆಗೆ ಪಣತೊಟ್ಟು
ಮೌನ ಹೋರಾಟದಿ ಕ್ರಾಂತಿ ಮಾಡಿ
ಸಮಾಜದ ಶೋಷಣೆಗಳ ಕೂಗಾಗಿ
ಕೆಚ್ಚೆದೆಯ ಹೋರಾಟದ ಅಸ್ತ್ರ ಲೇಖನಿ
ಅದನ್ನು ಹಿಡಿದವನೇ ವೀರಾಗ್ರಣಿ

ಸುಶಿಕ್ಷಿತರ ಬ್ರಹ್ಮಾಸ್ತ್ರವಿದು
ದಮನಿತರ ಆಶಾಕಿರಣವಿದು
ದಾರಿತಪ್ಪಿದ ಆಡಳಿತಕ್ಕೆ
ಸನ್ಮಾರ್ಗ ದರ್ಶಿನಿ ಲೇಖನಿ
ಸಾವು ನೋವನ್ನು ಬಯಸದ
ಶಾಂತಿಯುತ ಹೋರಾಟದ ಶಸ್ತ್ರಾಸ್ತ್ರವಿದು

ಬರೀ ಶಾಹಿಯ ಸತ್ತ ಅಕ್ಷರಗಳ
ಗ್ರಂಥ ಮಾಲಿಕೆಯ ಕರ್ತೃ ಇದಲ್ಲ
ಶತಮಾನದ ಇತಿಹಾಸವ ದಾಖಲಿಸಿದ
ಜೀವಂತ ಸಾಕ್ಷಿಗಳ  ನಿರ್ಮಾತೃ
ಬದುಕಿನ ಅನುಭವಗಳನ್ನು ಬರೆದ
ಬುದ್ಧಿ ಬೆರಳುಗಳ ನಿಜ ಸಂಗಾತಿ ಈ ಲೇಖನಿ

0610ಪಿಎಂ24032018

*ಅಮು ಭಾವಜೀವಿ*
   

No comments:

Post a Comment