Thursday, June 13, 2019

ಹಾಯ್ಕು

*ಹಾಯ್ಕುಗಳು*

ಹಬ್ಬ ಮುಗಿದು
ಸಂಭ್ರಮ ಇಮ್ಮಡಿಸಿ
ಖುಷಿಯ ತಂತು

ನನಸಾಯಿತು
ಮನಸಿನ ಭಾವನೆ
ಈ ಕ್ಷಣದಲ್ಲಿ

ಜಗವನೆಲ್ಲ
ಜಯಿಸಬೇಕು ಇಂದು
ಪ್ರೀತಿಸುತಲಿ

ನೀ ಸೋಲದಿರು
ನಿನ್ನ ಬೆನ್ನೆಲುಬಾಗಿ
ನಾ ಇರುವಾಗ

ಜೊತೆಯಾಗಿರು
ನನ್ನೊಂದಿಗೆ ಬದುಕ
ಸುಖಕಾಗಿ ನೀ

ದೇವ ಮೆಚ್ಚನು
ದುಷ್ಟ ತನವನು ನೀ
ಸಲಹುತಿರು

ರಾತ್ರಿ ಹೊತ್ತು ನೀ
ನೆನಪುಗಳ ತಂದೆ
ಕನಸಿನಲ್ಲಿ

ಮರೆಯಲಾರೆ
ಮರೆತು ಕೂಡ ನಿನ್ನ
ಬಿಟ್ಟಿರಲಾರೆ

ಈ ಜಗದಲಿ
ಒಲವನರಸಿ ನಾ
ಬರುವೆ ಹಿಂದೆ

ಬಿಟ್ಟು ಮುಂದಕೆ
ಹೋದರೆ ನೊಂದು ಕೂತು
ಬೇಡುವೆ ನಿನ್ನ

ಅಂಗಲಾಚುವೆ
ಸಾಕು ಬಿಡು ಇರುಳು
ಬಂದಾಯ್ತು ಈಗ

ಮಲಗು ಬೇಗ
ಏಳು ಬೇಗ ಇದುವೇ
ಆರೋಗ್ಯಕರ

ಬೆಳೆಸಿಕೋ ಬಾ
ಪ್ರಕೃತಿ ಜೊತೆ ನೀನು
ಅನುಬಂಧವ

ಸಹಬಾಳ್ವೆಯ
ಸಹಮತದಿ ನಾವು
ಬಾಳಬೇಕಿಲ್ಲಿ

ಒಳಿತಿಗಾಗಿ
ಒಗ್ಗಟ್ಟಾಗಿ ಬಾಳೋಣ
ಬದುಕಿನಲ್ಲಿ

ಜೊತೆಯಾಗಿರು
ಗೆದ್ದು ಬರುವೆ ನಾನು
ಎಲ್ಲಾ ಸೋಲಲ್ಲೂ

ಧೈರ್ಯವಾಗಿರು
ಜಯ ಗಳಿಸಲಿಲ್ಲಿ
ಹೋರಾಡಬೇಕು

ರಾಜಿ ಮಾಡಿಕೋ
ಬೇಡ ಗೆಲುವಿಗಾಗಿ
ಶ್ರಮವಹಿಸು

ಭವಿಷ್ಯಕ್ಕಾಗಿ
ಬದಲಾಗು ಬದುಕ
ನಿಯಮವಿದು

ನಿಲ್ದಾಣ ಬಂದ
ಕಾರಣ ಇಳಿದು ನೀ
ಮನೆ ತಲುಪಿ

ಅನುಪಾಲಿಸು
ಅನುದಿನವೂ ನಿನ್ನ
ಯಶಸ್ಸಿಗಾಗಿ

ಕಾಲಾವಕಾಶ
ಇಲ್ಲ ಇಲ್ಲಿ ಓಡುತ
ಗುರಿ ಮುಟ್ಟು ನೀ

ಗುರಿ ಮುಟ್ಟುವೆ
ನಿನ್ನ ಬೆಂಬಲದಿಂದ
ಜೀವನದಲ್ಲಿ

ಜಯ ನಿನ್ನದೇ
ಜಗದ ಜಂಜಡದಿ
ಹೋರಾಡುತಿರು

ಜೊತೆಯಿರುವೆ
ಏನೇ ಆದರೂ ನೀನು
ಜಯಗಳಿಸು

ಮುನ್ನುಗುತಿರು
ನೀ ಒಂಟಿಯಲ್ಲ ನಾನು
ಜೊತೆಯಾಗುವ8

ಬಿಡದೆ ಯತ್ನ
ಮಾಡು ಇರುವ ಮೂರು
ದಿನದೊಳಗೆ

ಕೊನೆಗೆ ಯಾರು
ನಿನ್ನವರು ಎಂಬುದು
ತೀರ್ಮಾನ ಮಾಡು

ಏನು ಮಾಡಲಿ
ಯಾರ ಬೇಡಲಿ ಇಲ್ಲಿ
ಬದುಕಲಿನ್ನು

ಭಗವಂತನ
ದಯೆ ಇರಲು ನೀನು
ಜಗ ಗೆಲ್ಲುವೆ

ಜಗದೀಶನ
ಕರುಣೆಯಿರಲು ನೀ
ಯಶ ಪಡೆವೆ

ಮುನಿಯದಿರು
ಒಲವಿನಲಿ ಬಾಳು
ಬದುಕಿನಲಿ

ಕುಗ್ಗದಿರು ನೀ
ಜಗದ ನಿಂದನೆಗೆ
ಕಿವಿಗೊಡದೆ

ಮುನ್ನುಗ್ಗುತಿರು
ಎದೆಗುಂದದೆ ಸೋಲು
ಗೆಲುವಾಗಲು

ಜೀವನದಲಿ
ಪ್ರೀತಿಯ ನೆರಳಿರೆ
ಸುಖದ ತಾಣ

ನೆಮ್ಮದಿಯಿರೆ
ಬದುಕು ಸುಖಮಯ
ದಿನ ದಿನವೂ

ದಟ್ಟಣೆಯಿಂದ
ನುಸುಳಿ ಬಂದ ಕ್ಷಣ
ನಿರಾಳವಾಯ್ತು

ಸುಖವಾಗಿರು
ಜೀವನದಲ್ಲಿ ಎಂದೂ
ಸೋಲಲೇಬೇಡ

ಜೀವನದಲಿ
ಸೋತು ಗೆಲ್ಲು ಆಗಲೇ
ಸಾರ್ಥಕತೆಯು

ಎಂದೆಂದಿಗೂನು
ನಿನ್ನ ಬೆಂಬಲ ನನ್ನ
ದಡಕೊಯ್ಯಲಿ

ಈ ಸಂಜೆಯಲಿ
ನೆನಪ ರಂಗವಲ್ಲಿ
ಮುದ ತಂದಿತು

ಈ ಬುವಿಯಲಿ
ಮಳೆ ಬಂದರೆ ಸಾಕು
ಖುಷಿಯ ಕ್ಷಣ

ನಿನಗಾಗಿಯೇ
ಈ ಬದುಕು ಮುಡಿಪು
ಅನವರತ

ಇಳೆ ತಂಪಾಯ್ತು
ನಿನ್ನ ಪ್ರೀತಿಯ ಮಳೆ
ಸುರಿದಿರಲು

ಖುಷಿಯಾಯಿತು
ಜೊತೆ ಜೊತೆಗೆ ನೀವು
ಬರೆಯುತಿರೆ

ಕವಿತೆಯನು
ಬರೆಯಲು ನೀ ಸ್ಪೂರ್ತಿ
ನಿತ್ಯ ನನಗೆ

ಆಶೀರ್ವಾದವು
ಇರಬೇಕು ಪ್ರತಿಭೆ
ಈ ಅರಳಲು

ನಿನ್ನ ಕಾರಣ
ಬಾಳು ಹೂರಣ ಪ್ರೀತಿ
ಮರುಪೂರಣ

ಮರೆತು ಹೋದ
ಭಾವಸಂಗಾತಿಯನು
ಅರಸುತಿಹೆ

ಬೇಗ ಬರಲಿ
ಸೇರುವ ಆ ಕಾಲವು
ಬದುಕಿನಲ್ಲಿ

ನಿತ್ಯ ಹೋರಾಟ
ನೀನಿರದ ಬಾಳಲ್ಲಿ
ಸೋತು ನೊಂದಿಹೆ

*ಅಮು ಭಾವಜೀವಿ*

No comments:

Post a Comment