ಇವರು ನಮ್ಮ ನಾಯಕರು
•••••••••••••••••••••••••••
ಇವರು ನಮ್ಮ ನಾಯಕರು
ಅಧಿಕಾರಕಾಗಿ ಅಲೆಯುತಿಹರು
ಆಯ್ಕೆಯಾದ ಕ್ಷೇತ್ರ ತೊರೆದು
ಐಶಾರಾಮಿ ಬಂಧನಕೆ ಒಳಗಾಹರು
ಕ್ಷೇತ್ರದ ಹಳ್ಳಿಗಳು ನರಳುತ್ತಿವೆ
ಸಮಸ್ಯೆಗಳು ತಾಂಡವವಾಡುತ್ತಿವೆ
ತನ್ನನ್ನೇ ರಕ್ಷಿಸಿಕೊಳ್ಳದವ
ಆರಿಸಿದ ಅಮಾಯಕರನೇನು ರಕ್ಷಿಸಿಯಾನು
ಕೊಟ್ಟ ಭರವಸೆಗಳನೆಲ್ಲ ಮರೆತು
ಇಟ್ಟ ನಂಬಿಕೆಯನು ಪಕ್ಕಕ್ಕಿಟ್ಟು
ಇತ್ತ ತಲೆ ಹಾಕದೆ ಅತ್ತ ತಲೆಕೆಡಿಸಿಕೊಂಡು
ಅಲೆಯುತಿಹ ಇವರು ನಮ್ಮ ನಾಯಕರು
ಸ್ವಾಭಿಮಾನವೇ ಇಲ್ಲದವರು
ಅಭಿಮಾನವೇ ಮಾರಿಕೊಂಡವರು
ಆತ್ಮಸಾಕ್ಷಿಗೆ ದ್ರೋಹ ಬಗೆದು
ಅವಿತುಕೊಳ್ಳುತಿರುವ ಇವರೆಮ್ಮ ನಾಯಕರು
ಅಧಿಕಾರವೊಂದೇ ಇವರ ಮಂತ್ರ
ಜನಸಾಮಾನ್ಯನಾಗಿಹ ಅತಂತ್ರ
ಬೀದಿಗೆ ಬಿತ್ತು ನನ್ನ ಹೆಮ್ಮೆಯ ಪ್ರಜಾತಂತ್ರ
ಅದಕೆಲ್ಲ ಕಾರಣ ಇವರ ಕುತಂತ್ರ
ಯೋಚಿಸಬೇಡ ಮತದಾರ
ಮತ್ತೆ ಬರುವುದು ನಿನಗೆ ಅಧಿಕಾರ
ಆಗ ತೋರಿಸು ನಿನ್ನ ಸಾಮರ್ಥ್ಯ
ನಾಡಿಗೆ ನೀಡು ಉತ್ತಮರ ಸಾರಥ್ಯ
ಅಮು ಭಾವಜೀವಿ
ನನಗೆ ಬೇಕಾದದ್ದು ನಿನ್ನದೊಂದೇ ಬಹುಮತ.
ಆದರೆ ಅದೇಕೋ ನಮ್ಮಿಬ್ಬರಲ್ಲಿ ಬರದೇ ಹೋಯ್ತು ಒಮ್ಮತ.
ಅಮು ಭಾವಜೀವಿ
ನಾನು ಸೋತೆ
••••••••••••••••••
ಏನು ಮಾಡಲಿ ನಾನು
ಸೋತು ಹೋಗಿಹೆನು
ಬದುಕಬೇಕೆಂದು ಹಂಬಲಿಸುವ
ಕಾಲದಲ್ಲಿ ನಾ ಎಡವಿಬಿದ್ದೆ
ನಾ ಬೀಳುವುದನೇ ಕಕಾಯುತ್ತಿದ್ದವರ
ಕಲ್ಲಿನೇಟನು ತಿಂದು ಬಲು ನೊಂದೆ
ನನ್ನಂತಹವನಿಗಿಲ್ಲಿ ಬದುಕಿಲ್ಲ
ಬಯಸಿದ ಬದುಕೆನಗೆ ಸಿಗಲಿಲ್ಲ
ಕಿತ್ತು ತಿನ್ನುವ ಬಡತನ
ಅದಕೆ ಹಸಿವಿನ ಆಕ್ರಂದನ
ದುಡಿವ ಕೈಗೆ ಕೆಲಸವಿಲ್ಲದೆ
ಹಸಿವ ನೀಗಲು ಭಿಕ್ಷೆ ಬೇಡಿದೆ
ಹಳಸಿದನ್ನವೇ ಮೃಷ್ಟಾನ
ನೋಡಿ ನಗುತಿಹರು ಈ ಜನ
ಯಾರ ಶಾಪದ ಕೂಸು ನಾನು
ವಿಳಾಸವಿರದ ವಾಸದವನು ನಾನು
ಹಣೆಬರಹವನೇ ಹೊಣೆ ಮಾಡಿ
ಹತಾಶೆಯಲಿ ದೂಡುತಿಹೆ ಬಾಳ ಬಂಡಿ
ಬದುಕಿಗಾಗಿ ನಾನು ಸೋತೆ
ಸೋಲಿನ ಅವಮಾನದಿಂದ ಸತ್ತೆ
ಅಮು ಭಾವಜೀವಿ
ಮುಂಜಾನೆಯ ಹಬ್ಬಕ್ಕೆ
••••••••••••••••••••••
ಮೂಡಣದ ಮನೆಯಲ್ಲಿ
ಬೆಳಕಿನ ಚಿತ್ತಾರ
ಪ್ರಕೃತಿಯ ಮಡಿಲಲ್ಲಿ
ಸುಮ ರಾಶಿಯ ಶೃಂಗಾರ
ಈ ಆನಂದದ ಕ್ಷಣಕ್ಕೆ
ಹಕ್ಕಿಗಳ ಸುಮಧುರ ಗಾನ
ತಂಗಾಳಿಗೆ ತಲೆದೂಗುವ
ಎಳೆ ಪೈರಿನ ನರ್ತನ
ಇಬ್ಬನಿಯ ಹನಿಹನಿಯಲ್ಲೂ
ರವಿಯ ಮರುಸೃಷ್ಟಿಯ ಚಮತ್ಕಾರ
ನಿಸರ್ಗದ ಆ ಸಂಭ್ರಮಕ್ಕೆ
ಹೊನ್ನ ಕಿರಣಗಳ ಚಿತ್ತಾರ
ಮುಂಜಾನೆಯ ದಿನದ ಹಬ್ಬಕ್ಕೆ
ಗಿಡಮರಗಳ ಹಸಿರು ತೋರಣ
ಕವಿದ ಕತ್ತಲೆಯ ನಿರ್ಗಮನಕ್ಕೆ
ದಿನಮಣಿಯ ಬೆಳಕೇ ಕಾರಣ
ಮಳೆ ಬಂದ ಮರುದಿನದ
ಮುಂಜಾನೆ ನೋಡಲು ಬಲು ಚೆಂದ
ನಿಸರ್ಗದ ಈ ವಿಸ್ಮಯವ
ಕವಿ ಭಾವದಲ್ಲಿ ಸವಿಯುವುದೇ ಆನಂದ
ಅಮು ಭಾವಜೀವಿ
ನೋವಿಗೆ ಕಾತರ
ಸಾವಿಗೆ ಹತ್ತಿರ
ಪತಂಗದಂತೆ ಸುಟ್ಟು ಹೋಗಿಹೆ
ಬದುಕಿನ ಈ ಹೊಡೆತಕ್ಕೆ
ಬರದಿ ಬರಿದಾದ ಒಡಲಾಗಿಹೆ.
1039ಪಿಎಂ19052017
ಅಮುಭಾವಜೀವಿ
No comments:
Post a Comment