ಬರ ಬಂದಿದೆ ಬದುಕಿಗೆ ನೀನಿಲ್ಲದೆ
ಭರವಸೆ ಪಡೆಯಲಿ ಹೇಗೆ ನೀನಿಲ್ಲದೆ
ಭಾವದ ಎಲೆಗಳೆಲ್ಲ ಉದುರಿಹೋಗಿವೆ
ಕೊರಡು ಕೊನರುವುದು ಹೇಗೆ ನೀನಿಲ್ಲದೆ
ಅಂತರಂಗದ ಒರತೆಗಳೆಲ್ಲ ಬತ್ತಿರಲು
ಮರುಪೂರಣಗೊಳಿಸಲಿ ಹೇಗೆ ನೀನಿಲ್ಲದೆ
ಬಯಕೆಗಳೆಲ್ಲ ಬಾಯಾರಿ ಸೊರಗಿರಲು
ದಾಹ ನೀಗಿಸಿಕೊಳ್ಳಲಿ ಹೇಗೆ ನೀನಿಲ್ಲದೆ
ಚೈತ್ರ ಬಂದಾಗಲೂ ಕೂಡ ಕೂಗಲು
ದನಿಯಿರದು ಕೋಗಿಲೆಗೆ ನೀನಿಲ್ಲದೆ
ಹೊಂಗೆ ನೆರಳಲ್ಲಿ ಕೂತು ಕನವರಿಸಿಹೆ
ಮಧುಬಟ್ಟಲು ಖಾಲಿಯಾಗಿದೆ ನೀನಿಲ್ಲದೆ
ಅಮು ಭಾವದ ಬದುಕು ನಿಂತು ಹೋಗಿದೆ
ಮತ್ತೆ ಶುರು ಮಾಡಲಿ ಹೇಗೆ ನೀನಿಲ್ಲದೆ
6.45 ಪಿಎಂ 08042019
ಅಮು ಭಾವಜೀವಿ
No comments:
Post a Comment