ಎಲ್ಲಾ ಎಲೆಯುದುರಿ
ಮೆಲ್ಲ ತಾ ಚಿಗುರಿ
ನರುಗಂಪಿನಲರು ಹೊಮ್ಮುವಾಗ
ವಸಂತದ ರವಿಯ ಆಗಮನ
ಹಾಡು ಮರೆತ ಕೋಗಿಲೆ
ಇಂಪಾಗಿ ಹಾಡುವುದ ಕಲಿತು
ಹೊಂಗೆ ಹೂವ ತೊಂಗಲಲ್ಲಿ ಕೂತು
ದಿನಕರನುದಯಕ್ಕೆ ಸ್ವಾಗತ ಕೋರಿತು
ಮುಂಗಾರಿನ ಅಭಿಷೇಕಕೆ
ಇಳೆಯಲ್ಲವೂ ಮೈ ತಣಿದು
ನೆನೆದ ಆ ಕಂಪಿನೊಳಗಿಂದ
ಹೊಸ ಭರವಸೆಗಳು ಮೊಳಕೆಯೊಡೆದವು
ಬರಡಾದ ನಿಸರ್ಗದೊಳಗೀಗ
ಹರೆಯ ತುಂಬಿದ ಸಂಭ್ರಮ
ಹರಿವ ನೀರ ಧಾರೆಗೀಗ
ಕಡಲ ತೆಕ್ಕೆ ಸೇರುವ ಸಮಾಗಮ
ಮುಂಜಾನೆಯಿದು ಬದುಕಿನಾರಂಭ
ಮೂಡಣದ ಮನೆಯಲ್ಲಿ ರಂಗಾವಳಿ
ದಿನಪೂರ್ತಿ ನಲಿವ ಹೊತ್ತು ತರುವ
ಬೆಳಗಿನೊಡೆಯ ರವಿಯ ಚಿತ್ರಾವಳಿ
06:28 ಎಎಂ 09 04 2019
*ಅಮು ಭಾವಜೀವಿ*
No comments:
Post a Comment