Friday, June 14, 2019

*ಮೌನದ ಸುಳಿ*

ಈ ಮೌನದ ಸುಳಿಗೆ ಸಿಕ್ಕು
ನಾ ಮನದಿ ಮರುಗಿದೆನು
ಈ ಸಂಜೆಯ ಹೊತ್ತು ಕುತ್ತು
ತರುವುದೆಂದು ಹೆದರಿದೆನು

ಬೇಸರದ ಛಾಯೆ ಕೆಂಪಾಗಿ
ಇಳಿಸಂಜೆ ಬಾನ ಆವರಿಸಿ
ವಿಷಾದದ ರೂಪ ತಾಳಿದೆ
ಇಳಿವ ಇರುಳ ಪಾಳಿಯಲ್ಲಿ
ಚಂದಿರನಿಲ್ಲದ ಆಗಸದಿ
ಚೆಲುವೇ ಇಲ್ಲದೆ ಮನ ನೊಂದಿದೆ

ಕರಾಳ ರಾತ್ರಿಯಲಿ
ಕದಡಿದ ಮನದ ನೋವ
ಕೂಗು ಭಯ ತರುತಿದೆ
ಕಿಡಿ ಹಾರಿದ ಭಾವಗಳು
ಇರುಳನೇ ಸುಡುತಿರಲು
ಬದುಕು ಬೇಸರಕೆ ತುತ್ತಾಗಿದೆ

ಎಡವಿದೆಡೆಯಲಿ ರಕುತ
ಸೋರುತಿರಲು ಉಷೆಯ
ಕಿರಣ ಅದನೆ ಮೆತ್ತಿಕೊಂಡಾಗ
ಮುಂಜಾನೆಯ ಮಂಜಿನ ಹನಿಯಲಿ
ಮೊಗವ ತೊಳೆಯಲು ಮತ್ತದೇ
ವರ್ಣಚಿತ್ತಾರ ಮನವ ಸಂತೈಸಿತು

04062019

*ಅಮು ಭಾವಜೀವಿ*

No comments:

Post a Comment