Friday, June 14, 2019

*ಹಿತವಾದ ಕನಸು*

ಮೂಡಣಕೀಗ ಕತ್ತಲಾಗುವ ಭಯ
ಪಡುವಣಕೀಗ ರಸ ಸಮಯ
ಮುಸ್ಸಂಜೆಯ ರಂಗಿನೋಕಳಿ
ಬಾನೆತ್ತರ ಜಿಗಿದಿದೆ ಗೋಧೂಳಿ

ಹಗಲೆಲ್ಲಾ ಉರಿದ ರವಿಗೆ
ಇರುಳಿನ ಈ ಪಲ್ಲಂಗ ಹಾಸಿದೆ
ತಂಗಾಳಿಯ ಜೋಗುಳ ಕೇಳಿ
ಅವನಿಗೂ ಹಿತವಾದ ಕನಸು ಬಿದ್ದಿದೆ

ಚಂದ್ರ ತಾರೆಗಳ ತೊಟ್ಟಿಲಿನಲ್ಲಿ
ಸಾಗರದ ಅಲೆಗಳ ಏರಿಳಿತದಲ್ಲಿ
ನಿಶಬ್ದ ರಾತ್ರಿಯ ಮೌನದಲ್ಲಿ
ಜೋಂಪು ಹತ್ತಿದೆ ತಂಪು ವೇಳೆಯಲಿ

ಮೋಡದ ಹಿಂದೆ ಓಡುವ ಚಂದಿರ
ಕಣ್ಣಾ ಮುಚ್ಚಾಲೆ ಆಡುವ ಸಡಗರ
ಕಂಡನು ರವಿ ಕನವರಿಸಿದನು
ತಾನೂ ಕೂಡ ಆಡಲು ಬಯಸಿದನು

ಅವನ ತಾಪಕೆ ಮೋಡವು ಕರಗಿ
ನೀಲಾಗಸದಿ ಒಬ್ಬನೇ ಸಾಗಿ
ಸಂಗಾತಿ ಇಲ್ಲದೆ ನಿತ್ಯವೂ ಕೊರಗಿ
ನಿದ್ರೆಗೆ ಜಾರಿದ ಬೆಟ್ಟಕೊರಗಿ

ಬೆಳ್ಳಿಯು ಮೂಡಿತು ಮತ್ತೆ
ಇಬ್ಬನಿಯನ್ನು ಚಿಮುಕಿಸುತ್ತಾ
ಹಕ್ಕಿಗಳ ಇನಿದನಿ ಮೊಳಗಿ
ಉಷೆಯ ಕಿರಣಗಳವನ ಎಬ್ಬಿಸಿತು

0706ಪಿಎಂ25052019
ಅಮು ಭಾವಜೀವಿ

No comments:

Post a Comment