ಯಾರೋ ಬರೆದ ಭಾವಗೀತೆಗೆ
ನಾನು ದನಿಯಾದೆ
ಯಾರೋ ಗೀಚಿದ ಚಿತ್ರದಲ್ಲಿ
ಹುದುಗಿದ ನೋವ ಭಾವವಾದೆ
ಅಂತರಂಗದ ಆಸೆಗಳಿಗೆ
ಮನುವಾದಿಯ ಬೇಲಿ ಹಾಕಿದರು
ಭಾವತೀವ್ರತೆಯ ಒತ್ತಡಕ್ಕೆ
ಮನದ ಕಟ್ಟೆಯೊಡೆದು ಹರಿಯಿತು ನೆತ್ತರು
ಒಂದೇ ಕೈಯ ಐದೂ ಬೆರಳು
ಬೊಟ್ಟು ಮಾಡಿ ತೋರಿದ್ದು ನನ್ನನ್ನೇ
ಒಂದೇ ಒಂದು ಪ್ರೀತಿ ಮಾತು
ಆಡದೆ ಚುಚ್ಚಿ ಕೊಂದರು ನನ್ನನ್ನೇ
ಸಂಜೆ ಮಬ್ಬುಗತ್ತಲಿನಲ್ಲಿ ನನ್ನ
ಬಳಿ ಬಂದು ಪಲ್ಲಂಗ ಏರಿದವರೇ
ಮುಂಜಾನೆ ಬೆಳಕು ಹರಿಯುತ್ತಲೇ
ನನ್ನ ಸೂಳೆಯೆಂದು ಸಾರಿದರವರೇ
ಒಡಲ ಹಸಿವ ಜ್ವಾಲೆ ಸುಡುವಾಗ
ಹಿಡಿ ಅನ್ನದಮೃತವ ಯಾರೂ ನೀಡಲಿಲ್ಲ
ಹರಿದ ಚಿಂದಿಯಲಿ ಕಂಡ ಅಂಗಗಳ
ಜೊಲ್ಲು ಸುರಿಸುತ್ತ ನೋಡಿದವರೇ ಎಲ್ಲಾ
ಬಲು ದೂರ ಸಾಗಿ ಬಂದೆ
ಬಲ್ಲವರ ಬಡಿವಾರದ ಮುಂದೆ
ಜೋತು ಬಿದ್ದ ದೇಹದೊಳಗಿಂದ
ಕೀವು ಸೋರಲು ಯಾರ ಸುಳಿವಿಲ್ಲ ನನ್ನ ಮುಂದೆ
0541ಎಎಂ26052019
*ಅಮು ಭಾವಜೀವಿ*
No comments:
Post a Comment