*ಪ್ರೀತಿ ಅಲ್ಲವೇ ನಿನ್ನ ಹೆಸರು*
ನಾ ಬರೆಯ ಬೇಕೆಂದಾಗಲೆಲ್ಲಾ
ಈ ಬಂದು ಕೂರುತಿ ಎದೆಯಲ್ಲಿ
ನನ್ನೆಲ್ಲ ಭಾವವೇ ನೀನಾಗಿ
ರೂಪ ಪಡೆಯುವ ಕವಿತೆಯಲ್ಲಿ
ನಾ ಬರೆವ ಪ್ರತಿ ಅಕ್ಷರದ ಮೇಲೂ
ನಿನ್ನ ಬಲವಾದ ಹಿಡಿತವಿದೆ
ಅದಕ್ಕಾಗಿಯೇ ಏನೋ ನನ್ನಲ್ಲಿ
ನಿನ್ನನೇ ಚಿತ್ರಿಸುವ ತುಡಿತವಿದೆ
ಕಣ್ಣ ಮುಚ್ಚಲು ನಿನ್ನದೇ ರೂಪ
ಕಣ್ಣು ಬಿಡಲು ನೀನಲ್ಲಿ ಬಾನ ದೀಪ
ನೀ ನಕ್ಕರೆ ಹೊಳೆವ ಮಿಂಚು
ನಿನ್ನ ಅಕ್ಕರೆ ನನಗೆ ಅಚ್ಚುಮೆಚ್ಚು
ಹರಿವ ನೀರು ನೀನಾಡುವ ಮಾತು
ಉಕ್ಕುವ ತೊರೆ ನಿನ್ನ ಗಮ್ಮತ್ತು
ಸಾಗರದ ಆಳ ಅಗಲ ನೀನು
ನಾ ನಿನ್ನೊಳು ಮುಳುಗಿದ ಭಾನು
ಪ್ರಯತ್ನಗಳನ್ನೆಲ್ಲ ತಲೆಕೆಳಗಾಗಿಸಿ
ನನ್ನ ಕಲ್ಪನೆಯೊಳಗೆ ಪ್ರವೇಶಿಸಿ
ಭಾವದ ಕಾರಂಜಿಯು ಚಿಮ್ಮುವ
ಪ್ರೀತಿ ಅಲ್ಲವೇ ನಿನ್ನ ಹೆಸರು
0600ಪಿಎಂ29102014
ಅಮು ಭಾವಜೀವಿ
No comments:
Post a Comment